FacebookTwitter

ನಾಪತ್ತೆಯಾಗಿದ್ದ ಮರಾಠಿ ನಟಿ ಚೆನ್ನೈನಲ್ಲಿ ಬಾಯ್`ಫ್ರೆಂಡ್ ಜೊತೆ ಪತ್ತೆ..!

 

ಚೆನ್ನೈ(ಜ.10): ಇದು ಯಾವುದೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂಥಾ ನಡೆದಿರುವ ಕಥೆ. ಅಪಘಾತದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ 40 ವರ್ಷದ ಮರಾಠಿ ನಟಿಯೊಬ್ಬಳು ಚೆನ್ನೈನಲ್ಲಿ ತನ್ನ ಬಾಯ್`ಫ್ರೆಂಡ್ ಜೊತೆ ಪತ್ತೆಯಾಗಿದ್ದಾಳೆ. ಅಷ್ಟೇ ಅಲ್ಲ, ಸುಳ್ಳು ಅಪಘಾತದ ಸನ್ನಿವೇಶ ಸೃಷ್ಟಿಸಿ, ತನ್ನ ಗುರುತು ಸಿಗದಂತೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಚೆನ್ನೈನಲ್ಲಿ ತನಗಿಂತಲೂ ಅತ್ಯಂತ ಕಿರಿಯ ಬಾಯ್`ಫ್ರೆಂಡ್ ಜೊತೆ ವಿಲಾಸಿ ಜೀವನ ನಡೆಸುತ್ತಿದ್ದ ಸುದ್ದಿ ಸಹ ಇದೀಗ ಬಯಲಾಗಿದೆ.

ತನ್ನ ಹೆಸರನ್ನ ನಿಖಿತಾ ಮೋಹನ್ ಎಂದು ಬದಲಾಯಿಸಿಕೊಂಡಿದ್ದ ಅಲ್ಕಾ ಪುನೇವರ್, ತನ್ನ ತಂದೆ ತಾಯಿ ಅಪಘಾತದಲ್ಲಿ ಸಾವನ್ನಪ್ಪಿದರು ಎಂದು ಗೆಳೆಯನ ತಂದೆ ತಾಯಿಯನ್ನ ನಂಬಿಸಿದ್ದಳು.

ಏನಿದು ಸ್ಟೋರಿ..?: ಅಲ್ಕಾ ಪುನೇವರ್, ಮಹಾರಾಷ್ಟ್ರದ ಮರಾಠಿ ನಟಿ. 40 ವರ್ಷದ ಈ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಲೋಕ್ ಪಲಿವಾಲ್ ಎಂಬ 29 ವರ್ಷದ ವ್ಯಕ್ತಿಯೊಬ್ಬನ ಪರಿಚಯವಾಗುತ್ತೆ. ಪರಿಚಯ ಕ್ರಮೇಣ ಪ್ರೀತಿಗೆ ತಿರುಗುತ್ತೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸ್ಥಿತಿಗೆ ತಲುಪುತ್ತಾರೆ. ಕೊನೆಗೆ ಮದುವೆಯಾಗಿ ಒಟ್ಟಾಗಿ ಬಾಳುವ ನಿರ್ಧಾರ ಮಾಡಿದ 2 ಮಕ್ಕಳ ತಾಯಿ ಅಲ್ಕಾ ಪುನೇವರ್, ತನ್ನ ಬಾಯ್`ಫ್ರೆಂಡ್ ಜೊತೆ ಸೇರಿ ಒಂದು ಅಪಘಾತದ ಮಾಸ್ಟರ್ ಪ್ಲಾನ್ ರೂಪಿಸುತ್ತಾಳೆ.

ಥಾಣೆ ಬಳಿಯ ಕಾಲುವೆಯೊಂದಕ್ಕೆ ತನ್ನ ಕಾರನ್ನ ತಳ್ಳಿ ಮೊಬೈಲ್ ಅನ್ನ ಅಲ್ಲೇ ಬಿಟ್ಟು ಪರಾರಿಯಾಗಿರುತ್ತಾಳೆ. ಡಿಸೆಂಬರ್ 20ರಂದು 700 ಅಡಿ ಆಳದ ಕಣಿವೆಯಲ್ಲಿ ಕಾರನ್ನ ಕಂಡ ಪೊಲೀಸರಿಗೆ ಸ್ಥಳದಲ್ಲಿ ಯಾವುದೇ ರಕ್ತದ ಕಲೆ ಸಿಗುವುದಿಲ್ಲ. ಸಿಕ್ಕ ಮೊಬೈಲ್`ನಲ್ಲಿ ಸಿಮ್ ನಾಪತ್ತೆಯಾಗಿರುತ್ತೆ. ಅಷ್ಟರೊಳಗೆ ಅಲ್ಲಿ ಇಲ್ಲಿ ಹುಡುಕಾಡಿದ ಅಲ್ಕಾ ಪುನೇವರ್ ಪತಿ ಅಜಯ್ ಡಿಸೆಂಬರ್ 27ರಂದು ಪುಣೆಯ ಪೊಲೀಸ್ ಠಾಣೆಯಲ್ಲಿ ಸ್ಟೇಜ್ ಶೋ ನೀಡಲು ತೆರಳಿದ್ದ ಹೆಂಡತಿ ವಾಪಸ್ ಬಂದಿಲ್ಲವೆಂದು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸುತ್ತಾರೆ.

ಇದೇ ಸಂದರ್ಭ ಮುಂಬೈನ ಪ್ರಾಪರ್ಟಿ ಸೆಲ್ ಅಧಿಕಾರಿಗಳು ಅಲ್ಕಾ ಪುನೇವರ್ ಸ್ನೇಹಿತನೊಬ್ಬನನ್ನ ಬಂಧಿಸಿದಾಗ ಮಾಸ್ಟರ್ ಪ್ಲಾನ್ ತೆರೆದುಕೊಳ್ಳುತ್ತೆ. ಅಲ್ಕಾ ಪುನೇವರ್ ಮಾಸ್ಟರ್ ಪ್ಲಾನ್ ಬಗ್ಗೆ ಬಾಯ್ಬಿಟ್ಟ ಸ್ನೇಹಿತ ತಾನೇ ಆ ಕಾರನ್ನ ಕಾಲುವೆಗೆ ನೂಕಿದ್ದಾಗಿ ಹೇಳುತ್ತಾನೆ.

ಇದರ ಜಾಡು ಹಿಡಿದ ಪೊಲೀಸರು ಚೆನ್ನೈನಲ್ಲಿ ಅಲ್ಕಾ ಪುನೇವರ್ ಮತ್ತು ಆಕೆಯ ಪ್ರಿಯಕರ ಅಲೋಕ್`ನನ್ನ ಬಂಧಿಸಿ ಮುಂಬೈಗೆ ಕರೆದೊಯ್ದಿದ್ಧಾರೆ. ಡಿಸೆಂಬರ್ 20ರಂದು ಅಂದು ಸ್ಟೇಜ್ ಶೋ ಮುಗಿಸಿಕೊಂಡು ಪುಣೆಗೆ ವಾಪಸ್ ಆಗಬೇಕಿದ್ದ ನಟಿ ಕಾರನ್ನ ಕಂದಕಕ್ಕೆ ತಳ್ಳಿ ತನ್ನ ಪ್ರಿಯಕರನ ಜೊತೆ ನೆವಿಮುಂಬೈಗೆ ಬಂದಿದ್ದಳು. 

ಅಲ್ಕಾ ಪುನೇವರ್`ಗೆ ಇಬ್ಬರು ಅವಳಿ ಗಂಡು ಮಕ್ಕಳಿದ್ದು, ಕೊನೆಗೆ ಬಾರಿಗೆ ಅಮ್ಮನ ಜೊತೆ ಮಾತನಾಡಿ ತಮ್ಮ ೆರಡೇ ಎರಡು ಪ್ರಶ್ನಿಗಳಿಗೆ ಉತ್ತರ ಪಡೆಯಬೇಕೆಂದು ತವಕಿಸುತ್ತಿದ್ದಾರೆ. ತನ್ನ ತಾಯಿ ಮಾಡಿ ಕೆಲಸದಿಂದ ನನ್ನ ಸ್ನೇಹಿತರು ಕೇಳುವ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದೇನೆ ಎನ್ನುತ್ತಾನೆ ಮಗ ಪ್ರತೀಕ್ ಪುನೇವರ್.

ಒಟ್ಟಿನಲ್ಲಿ, ಮೋಹದ ಬೆನ್ನತ್ತಿ ಎಲ್ಲರ ಕಣ್ಣಿಗೆ ಮಣ್ಣೆರಚಿ ಪ್ರಿಯಕರನ ಜೊತೆ ವಿಲಾಸ ಜೀವನಕ್ಕೆ ಮುಂದಾಗಿದ್ದ ಮರಾಠಿ ನಟಿ ಅಲ್ಕಾ ಪುನೇವರ್ ಈಗ ಜೈಲು ಸೇರಿದ್ದಾಳೆ.

 

 

 

Add comment