FacebookTwitter

ನಟಿ ಸುಚಿತ್ರಾ ಸೇನ್ ವಿಧಿವಶ

ಕೋಲ್ಕತಾ(ಜ.17): ದಶಕಗಳ ಹಿಂದೆ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ದಂತಕಥೆಯಾಗಿ ಬೆಳಗಿದ್ದ ಖ್ಯಾತ ನಟಿ ಸುಚಿತ್ರಾ ಸೇನ್ ಇಹಲೋಕ ತ್ಯಜಿಸಿದ್ದಾರೆ. 83 ವರ್ಷದ ಸುಚಿತ್ರಾ ಇಂದು ಶುಕ್ರವಾರ ಬೆಳಗ್ಗೆ 8:25ಕ್ಕೆ ನಿಧನರಾಗಿದ್ದಾರೆ. 1952ರಿಂದ ಮೂರು ದಶಕಗಳ ಕಾಲ ಕಲಾಸೇವೆ ಮಾಡಿದ್ದ ಈ ನಟಿಗೆ ಹೃದಯಾಘಾತದಿಂದ ಸಾವಾಯಿತು ಎನ್ನಲಾಗಿದೆ. ಸುಚಿತ್ರ ಸೇನ್ ಅವರು ಕಳೆದ 26 ದಿನಗಳಿಂದ ಶ್ವಾಸಕೋಶ ತೊಂದರೆಯಿಂದಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದಿನ ಬಾಂಗ್ಲಾದೇಶದ ಪಾಬ್ನಾ ಜಿಲ್ಲೆಯಲ್ಲಿ 1931ರ ಏಪ್ರಿಲ್ 6ರಂದು ಸುಚಿತ್ರಾ ಸೇನ್ ಜನನವಾಗಿದ್ದು. 1947ರಲ್ಲಿ ದಿಬಾನಾಥ್ ಸೇನ್ ಅವರನ್ನ ವಿವಾಹವಾದರು... ಮೂನ್ ಮೂನ್ ಸೇನ್ ಎಂಬ ಮಗಳೂ ಇದ್ದಾಳೆ.

ಹಿಂದಿ "ದೇವದಾಸ್" ಚಿತ್ರದ ಪಾರೋ ಪಾತ್ರದ ಮೂಲಕ ದೇಶದ ಜನರ ಮನೆಮಾತಾಗಿದ್ದ ಸುಚಿತ್ರಾ ಸೇನ್ 1952-1978ರವರೆಗೂ ಚಿತ್ರದ ರಾಣಿಯಾಗಿ ಮೆರೆದಿದ್ದರು... ಮೋಹಕ ನಗೆಯ ಈಕೆಯನ್ನ ತೆರೆಯ ಮೇಲೆ ನೋಡಲು ಜನ ಮುಗಿಬೀಳುತ್ತಿದ್ದುದಂತೂ ಸುಳ್ಳಲ್ಲ. "ದೇವದಾಸ್", "ಆಂಧಿ", "ಸಾತ್ ಪಾಕೆ ಬಂಧಾ", "ಅಗ್ನಿಪರೀಕ್ಷಾ" ಮೊದಲಾದ ಶ್ರೇಷ್ಠ ಚಿತ್ರಗಳಲ್ಲಿ ಸುಚಿತ್ರಾ ಸೇನ್ ಅಭಿನಯಿಸಿದ್ದರು...

ಬಲವಂತದಿಂದ ನಟನೆಗೆ ಬಂದರು... ಜಿದ್ದಿನಿಂದ ಬೆಳೆದರು...
ಸುಚಿತ್ರಾ ಸೇನ್ ಚಿತ್ರರಂಗಕ್ಕೆ ಅಡಿ ಇಟ್ಟಿದ್ದು ವಿಚಿತ್ರ ರೀತಿಯಲ್ಲಿ... ಪತಿ ದೀಬಾನಾಥ್ ಸೇನ್'ಗೆ ಈಕೆ ನಟಿಯಾಗಬೇಕೆಂಬ ಅದಮ್ಯ ಆಸೆ ಇತ್ತಂತೆ. ಪತಿಯ ಒತ್ತಾಯಕ್ಕೆ ಮಣಿದು ಸುಚಿತ್ರಾ ಸೇನ್ ಸಿನಿಮಾ ನಟನೆ ಯತ್ನಿಸಿದರು. ಆದರೆ, ಆಕೆಯ ಮೊದಲ ಯತ್ನ "ಪ್ರಥಮ ಚುಂಬನೇ ದಂತಭಗ್ನಂ" ಎಂಬಂತಾಗಿತ್ತು. ನಿರ್ಮಾಪಕರು ಆಕೆಯನ್ನ ತಿರಸ್ಕರಿಸಿದರು. ಅಷ್ಟೇ ಅಲ್ಲ, ಆಕೆ ನಟಿಸಿದ ಮೊದಲ ಚಿತ್ರ ಬಿಡುಗಡೆಯ ಭಾಗ್ಯ ಪಡೆಯಲೇ ಇಲ್ಲ... ಇದೇ ಆಯಿತು... ಸುಚಿತ್ರ ಸೇನ್ ಇದನ್ನೇ ಸವಾಲಾಗಿ ತೆಗೆದುಕೊಂಡು ಮುನ್ನುಗ್ಗಿದರು. ಮುಂದೆ 25 ವರ್ಷಗಳ ಕಾಲ ಬಂಗಾಳಿ ಚಿತ್ರರಂಗದ ಸಾಮ್ರಾಜ್ಞಿಯಾಗಿ ಬೆಳೆದರು.

ಸತ್ಯಜಿತ್ ರೇ, ರಾಜ್ ಕಪೂರ್ ಚಿತ್ರಗಳನ್ನೇ ಬೇಡವೆಂದಿದ್ದರು...
ಭಾರತೀಯ ಚಿತ್ರರಂಗದ ಅದ್ಭುತ ನಿರ್ದೇಶಕರೆನ್ನಲಾಗುವ ಸತ್ಯಜಿತ್ ರೇ ಮತ್ತು ರಾಜಕಪೂರ್ ಅವರು ತಮ್ಮ ಚಿತ್ರಗಳಿಗೆ ಸುಚಿತ್ರಾ ಸೇನ್ ಅವರನ್ನ ನಾಯಕಿಯನ್ನಾಗಿ ಮಾಡಲು ಯತ್ನಿಸಿದ್ದರು. ಆದರೆ, ಡೇಟ್ಸ್ ಹೊಂದಾಣಿಕೆ ಮೊದಲಾದ ಕಾರಣಗಳಿಂದ ಸುಚಿತ್ರಾ ಅವರು ಯಾವತ್ತಿಗೂ ಅವರಿಬ್ಬರ ಚಿತ್ರಗಳಲ್ಲಿ ನಟಿಸಲಿಲ್ಲ...

ಉತ್ತಮ್ ಕುಮಾರ್ ಜೊತೆ ಪರ್ಫೆಕ್ಟ್ ಜೋಡಿ...
ಸುಚಿತ್ರಾ ಸೇನ್ ಮತ್ತು ಉತ್ತಮ್ ಕುಮಾರ್ ಜೋಡಿ ಬಂಗಾಳಿ ಚಿತ್ರರಂಗಕ್ಕೆ ಕಳಶಪ್ರಾಯವಾಗಿತ್ತು. ಅವರಿಬ್ಬರ ಕಾಂಬಿನೇಶನ್ ನಿಜಕ್ಕೂ ಜನರನ್ನ ಮೋಡಿ ಮಾಡಿತ್ತು...

ಸುಚಿತ್ರಾ ಸೇನ್ ನಟಿಸಿರುವ ಕೆಲ ಚಿತ್ರಗಳು...
* ಕಜೋರಿ - ಬಂಗಾಳಿ (1953)
* ಅಗ್ನಿಪರೀಕ್ಷಾ - ಬಂಗಾಳಿ (1954)
* ಧುಲಿ - ಬಂಗಾಳಿ (1954)
* ದೇವದಾಸ್ - ಹಿಂದಿ (1955)
* ಶಾಪ್'ಮೋಚನ್ - ಬಂಗಾಳಿ (1955)
* ಏಕ್ತೀ ರಾತ್ - ಬಂಗಾಳಿ (1956)
* ಮುಸಾಫಿರ್ - ಹಿಂದಿ (1957)
* ಸಪ್ತಪದಿ - ಬಂಗಾಳಿ (1961)
* ಉತ್ತರ್ ಫಾಲ್ಗುಣಿ - ಬಂಗಾಳಿ (1963)
* ಗೃಹದಾಹಾ - ಬಂಗಾಳಿ (1967)
* ಹಾರ್ ಮಾನಾ ಹಾರ್ - ಬಂಗಾಳಿ (1972)
* ಆಂಧಿ - ಹಿಂದಿ (1975)

 

 

 

Add comment