FacebookTwitter

ಕೂಲ್ ಗಣೇಶ ಚಿತ್ರ ವಿಮರ್ಶೆ

    User Rating:  / 0
    PoorBest 

ಇದು ಜಗ್ಗೇಶ್ ಚಿತ್ರವಲ್ಲ!

ಚಿತ್ರ: ಕೂಲ್‌'ಗಣೇಶ
ಬಿಡುಗಡೆ: 29 ನವೆಂಬರ್ 2013

ಸಾಮಾನ್ಯವಾಗಿ ಸ್ವಮೇಕ್ ಚಿತ್ರಗಳಿಗೆ ಮಾತ್ರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಕ್ರೆಡಿಟ್ಟು ನಿರ್ದೇಶಕ, ನಿರ್ಮಾಪಕ ಅಥವಾ ಕಥೆ ಬರೆದವನಿಗೆ ದಕ್ಕುತ್ತದೆ. ಇನ್ನು ರಿಮೇಕ್ ಸಿನಿಮಾಗಳಾಗಿದ್ದರೆ 'ಕಥೆ ನನ್ನದು' ಅಂತ ಯಾರೂ ಹಾಕಿಕೊಳ್ಳಲ್ಲ. ಆದರಲ್ಲೂ ರಿಮೇಕೂ ಅಲ್ಲದ, ಸ್ವಮೇಕೂ ಅಲ್ಲದ ಚಿತ್ರಕ್ಕೆ? ಇದು ನಟ ಜಗ್ಗೇಶ್ ಅಭಿನಯದ 'ಕೂಲ್ ಗಣೇಶ' ಚಿತ್ರದ ಪ್ರೇಕ್ಷಕರ ಪ್ರಶ್ನೆ.

ತೆಲುಗಿನ 'ಪೂಲರಂಗಡು' ಚಿತ್ರದ ಫ್ರೇಮ್ ಟು ಫ್ರೇಮ್ ಝೆರಾಕ್ಸ್  ವಸಂತ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕೂಲ್ ಗಣೇಶ'. 'ಪೂಲರಂಗಡು' ಚಿತ್ರಕ್ಕೂ ಮೂಲ ಮಲೆಯಾಳಂ.  ಆದರೆ ಬಿ.ಎಂ. ಸುರೇಶ್ 'ಕಥೆ' ಕ್ರೆಡಿಟ್ಟು ತೆಗೆದುಕೊಂಡರೆ, ನಿರ್ದೇಶಕರು ಚಿತ್ರಕಥೆ, ಸಂಭಾಷಣೆಯನ್ನು ತಮ್ಮ ಹೆಸರಿಗೆ ಹಾಕಿಕೊಂಡಿದ್ದಾರೆ.

ನಟ ಜಗ್ಗೇಶ್‌ರ ಹಳೇ ಸೂತ್ರ ಇಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿದ್ದರೂ, ಹೆಸರಿಗೆ ತಕ್ಕಂತೆ ಕೂಲ್ ಆಗಿ ನೋಡಿಸಿಕೊಂಡು ಹೋಗುವುದಿಲ್ಲ.

ಪದೇಪದೇ ಪ್ರೇಕ್ಷಕನಿಗೆ ಕೂತ ಜಾಗದಲ್ಲೇ ಬಿಸಿ ಏರಿಸುವುದರಿಂದ ನೋಡುಗರ ಪಾಲಿಗೆ 'ಹೀಟ್ ಗಣೇಶ'ನಾಗುತ್ತಾನೆ. ಹಾಸ್ಯ ಚಿತ್ರಗಳಿಂದ ಪ್ರೇಕ್ಷಕ ಭರಪೂರ ಮನರಂಜನೆ ನಿರೀಕ್ಷಿಸುವುದು ತಪ್ಪಲ್ಲ. ಅದರಲ್ಲೂ ಜಗ್ಗೇಶ್ ಅಭಿನಯದ ಸಿನಿಮಾದಿಂದ ಮಾತು ಮಾತಿಗೂ ಕಚಗುಳಿ ಅಪೇಕ್ಷಿಸುವುದು ಸಹಜ. ಆದರೆ, ಈ ನಿರೀಕ್ಷೆ ಹುಸಿ ಮಾಡುವ ನಿಟ್ಟಿನಲ್ಲಿ ನಿರ್ದೇಶಕ ವಸಂತ್‌ ಆದಿಯಾಗಿ ಇಡೀ ಚಿತ್ರತಂಡ ಸಾಕಷ್ಟು ಶ್ರಮ ಹಾಕಿದೆ!

ಚಿತ್ರಕಥೆ, ನಿರೂಪಣೆ, ದೃಶ್ಯಗಳ ಸಂಯೋಜನೆಗಳು ನಾಯಕನ ಮೇಕಪ್‌'ನಷ್ಟೇ ಕೆಟ್ಟದಾಗಿದೆ. ಇನ್ನು ತನು ಕೌಶಿಕ್‌ ನಾಯಕಿಗಿಂತ ಜಗ್ಗೇಶ್‌'ರಿಗೆ ಅತ್ತಿಗೆಯಂತೆ ಕಾಣುತ್ತಾರೆ ಎಂದರೆ ಜಗ್ಗೇಶ್‌ ಅವರ ಯಂಗ್ ಲುಕ್‌'ಗೆ ಸಿಕ್ಕ ಬಿರುದಲ್ಲ! ಇದರ ನಡುವೆಯೂ ಚಿತ್ರದಲ್ಲಿ ಏನಾದರೂ ಮನರಂಜನೆ ಇದೆ ಎಂದರೆ, ಅದು ಜಗ್ಗೇಶ್‌ರ ಹಳೇ ಮ್ಯಾನರಿಸಂ, ಲವ್ ಟ್ರೈನಿಂಗ್ ಎಪಿಸೋಡ್, ನೊಣ ಹಿಡಿಯುವ ಡೈಲಾಗ್ ಹಾಗೂ ಶೋಭರಾಜ್‌ರ ಪಾತ್ರ. ಫೈನಾನ್ಷಿಯರ್ ಬಳಿ ಸಿಕ್ಕಾಪಟ್ಟೆ ಸಾಲ ಮಾಡಿರುವ ಕೂಲ್ ಗಣೇಶನ ಹಿಂದೆ ಸಾಲ ಕೊಟ್ಟವನು ಬೇಟೆ ಶುರು ಮಾಡುತ್ತಾನೆ. ಈ ನಡುವೆ ದೇವನಹಳ್ಳಿ ಬಳಿ ಸೈಟ್ ಮಾರಾಟದ ಡೀಲ್ ಗಣೇಶನ ಬಳಿಗೆ ಬಂದು, ಸಾಲ ಕೊಟ್ಟವನೇ ಆ ಸೈಟ್ ತೆಗೆದುಕೊಂಡು, ಜಾಮೀನಿಗೆ ಗಣೇಶನ ಅಪ್ಪನನ್ನು ಮುಂದೆ ನಿಲ್ಲಿಸಿಕೊಳ್ಳುತ್ತಾನೆ. ಆದರೆ, ಆ ಸೈಟು ಆಗಲೇ ಇಬ್ಬರ ಖಳನಟರ ದ್ವೇಷದ ಬಿಂದುವಾಗಿರುತ್ತದೆ. ಹೀಗಾಗಿ ಫೈನಾನ್ಷಿಯರ್‌'ಗೆ ಸೈಟು ಸಿಗಲ್ಲ. ಕೂಲ್ ಗಣೇಶ್‌ನ ಖಾತೆಗೆ ಮತ್ತೊಂದು ಸಮಸ್ಯೆ ಸೇರ್ಪಡೆಯಾಗುತ್ತದೆ. ಹೇಗಾದರೂ ಮಾಡಿ ಸೈಟ್ ವ್ಯವಹಾರ ಮುಗಿಸಬೇಕೆಂದು ದೇವನಹಳ್ಳಿಗೆ ಬರುವ ಗಣೇಶ ಖಳನಾಯಕನ ಅಗ್ನಿ ತಂಡಕ್ಕೆ ಸೇರಿಕೊಳ್ಳುತ್ತಾನೆ. ಇಲ್ಲಿಂದ ಕಥೆ ಸೈಟು, ಖಳನಟರ ಸವಾಲು, ನಾಯಕನ ಪ್ರೀತಿ, ಪ್ರೇಮಕ್ಕೆ ತಿರುಗುತ್ತದೆ.

 ಇಬ್ಬರು ಖಳನಟರು. ಇವರ ಪೈಕಿ ಒಬ್ಬರಿಗೆ ಸುಂದರವಾಗಿರುವ ಮಗಳು. ಒಂದು ಹಳೇ ದ್ವೇಷ. ಕಾಮಿಡಿ ಪೀಸು ಎನಿಸಿದರೂ ಎಲ್ಲವನ್ನೂ ಸಾಧ್ಯಗೊಳಿಸುವ ನಾಯಕ, ಇವನ ಸುತ್ತ ಭಜನೆ ಮಾಡುವ ನಾಲ್ಕೈದು ಗೆಳೆಯರು, ಕಣ್ಣೀರು ಹಾಕಲು ನಾಯಕನ ಅಪ್ಪ-ಅಮ್ಮ, ಒಂದಿಷ್ಟು ಕಾಮಿಡಿ ಎಪಿಸೋಡ್‌ಗಳು... ಇದು ಕಡಿಮೆ ಬಜೆಟ್‌ನ ತೆಲುಗು ಚಿತ್ರಗಳ ಪ್ರಸಿದ್ಧ ಸೂತ್ರ. ಅದೇ ಸೂತ್ರದ 'ಪೂಲರಂಗಡು' ಕನ್ನಡಕ್ಕೆ ಬರುವಾಗ ಸಾಕಷ್ಟು ಹಾದಿ ತಪ್ಪುತ್ತದೆ. ವಿರಾಮದ ನಂತರ ಮೂಲ ಕಥೆಯನ್ನೇ ಮುಂದುವರಿಸಬೇಕೋ, ಬೇಡವೋ ಎನ್ನುವ ಗೊಂದಲಕ್ಕೆ ಬಿದ್ದಂತೆ ಕಾಣುವ ವಸಂತ್, ಕ್ಲೈಮ್ಯಾಕ್ಸ್‌ನಲ್ಲಂತೂ ಹಿಡಿತ ಕಳೆದುಕೊಳ್ಳುತ್ತಾರೆ. ಇಡೀ ಚಿತ್ರವನ್ನು ಜಗ್ಗೇಶ್‌ರ ಹೆಗಲಿಗೆ ಕಟ್ಟಿ ವಸಂತ್ ಸುಮ್ಮನಾಗಿದ್ದಾರೆ. ಖಳ ನಾಯಕರ ಪೈಕಿ ಜೀವನ್ ಭರವಸೆ ಮೂಡಿಸುತ್ತಾರೆ. ಉಳಿದಂತೆ ಕುರಿ ಪ್ರತಾಪ್, ಚಿದಾನಂದ್, ಸುದರ್ಶನ್ ಇದ್ದಾರಷ್ಟೆ.

- ಆರ್. ಕೇಶವಮೂರ್ತಿ, ಕನ್ನಡಪ್ರಭ

 

 

 

Add comment