FacebookTwitter

ಚಡ್ಡಿದೋಸ್ತ್ ಚಿತ್ರ ವಿಮರ್ಶೆ

    User Rating:  / 1
    PoorBest 

ಫಿಟ್ ಹೈ ಬಾಸ್

ಚಿತ್ರ: ಚಡ್ಡಿ ದೋಸ್ತ್
ಬಿಡುಗಡೆ: 29 ನವೆಂಬರ್ 2013

ಸಾಧು ಕೋಕಿಲಾ, ರಂಗಾಯಣ ರಘು ಎಂದರೆ ತೆರೆ ಮೇಲೆ ಅವರು ಕಂಡ್ರೆ ಸಾಕು ಸಿಳ್ಳೆ ಬೀಳುತ್ತೆ ಎನ್ನುವಷ್ಟು 'ಸಿಳ್ಳೆ'ಖ್ಯಾತರು. ಹಾಗಾಗಿ ಖ್ಯಾತ ನಟರನ್ನು ಬಿಟ್ಟು ಇವರನ್ನೇ ನಾಯಕರನ್ನಾಗಿಸಿರುವ ಶೇಖರ್ ಅವರ ಇನ್ನೊಂದು 'ನಾಯಕ' ಪ್ರಧಾನ ಚಿತ್ರ 'ಚಡ್ಡಿದೋಸ್ತ್‌'.

'ಅಯ್ಯೋ ಈ ಲೆವೆಲ್‌ಗೆ ಇಂಟ್ರಡಕ್ಷನ್ ಬೇಡ ಕಣ್ರೋ' ಎನ್ನುತ್ತಲೇ ಗಾಳಿಯಲ್ಲಿ ಹಾರಿ ಎಂಟ್ರಿ ಕೊಡುವ ಸಾಧು, ತಮ್ಮ ಪಾತ್ರದ ವ್ಯಕ್ತಿತ್ವದಿಂದಲೇ ಹೀರೋ ಎನಿಸುವ ರಘು 'ಚಡ್ಡಿ'ದೋಸ್ತ್‌ನ 'ಜಾಕಿ'ಗಳು. ಹಾಗಾಗಿ, 'ಇಲ್ಲಿ ನಿಂತರೆ ಕಾಮಿಡಿಯನ್, ಇಲ್ಲಿ ನಿಂತರೆ ಹೀರೋ' ಎನ್ನುವ ಈ ಇಬ್ಬರೂ ನಟರದ್ದು ಇಲ್ಲಿ ಏಕಪಾತ್ರಾಭಿನಯ. 'ವಿಕ್ಟರಿ'ಯ ವಿಕ್ಟರಿಯನ್ನು ಬೆನ್ನತ್ತಿರುವ ನಿರ್ಮಾಪಕ ಮೋಹನ್ ಮತ್ತೆ ಸಂಭಾಷಣಾ ಪ್ರಧಾನ ಚಿತ್ರದ ಮೇಲೇ ನಂಬಿಕೆ ಇರಿಸಿದ್ದಾರೆ ಮತ್ತು ಅವರ ನಂಬಿಕೆ ಸುಳ್ಳಾಗಿಲ್ಲ. ಆದರೆ ಇಲ್ಲಿ ಸಂಭಾಷಣಾಕಾರರಾಗಿ ವಿಕ್ಟರಿ ಪ್ರಶಾಂತ್ ಬದಲು ಮಿಂಚಿರುವುದು ನಟರಾಜ್. ಚಿತ್ರದ ಹೆಸರು 'ಚಡ್ಡಿ' ದೋಸ್ತ್, ಹಾಗಾಗಿ 'ಸೊಂಟಕ್ಕೆ ಹತ್ತಿರವಾಗುವ' ಕೆಲವು ಸಂಭಾಷಣೆಗಳಿವೆ ನಿಜ. ಆದರೆ, ನಟರಾಜ್ ಸಂಭಾಷಣೆಯಲ್ಲಿ ಬರೀ ಡಬಲ್ ಮೀನಿಂಗ್ ಡೈಲಾಗ್‌'ಗಳೇ ಇವೆ ಎಂದರೆ ತಪ್ಪು, ಹಲವು ಮೀನಿಂಗ್‌'ಫುಲ್ ಸರಕನ್ನೂ ಬರೆದಿದ್ದಾರೆ ಅವರು. ರಘು, ಸಾಧು ಜೋಡಿಯ ಸಿನಿಮಾ ಆದ್ದರಿಂದ ಕಥೆ ಇಲ್ಲಿ ನಾಮ್‌ಕೇ ವಾಸ್ತೆ. ಹಾಗಂತ ಕಥೆಯೇ ಇಲ್ಲದೆ ರೀಲು ಸುತ್ತಿಲ್ಲ. ಗಟ್ಟಿಯಾದ ಸ್ನೇಹವನ್ನಿಟ್ಟುಕೊಂಡು ಕಥೆಯನ್ನು ತೆಳುವಾದ ಎಳೆಯಾಗಿಸಲಾಗಿದೆ. ಆದರೆ ಮನರಂಜನೆಗೆ ಖಂಡಿತಾ ಮೋಸವಾಗದ ಕಾರಣ ಮೊದಲಿನಿಂದ ಕೊನೆಯವರೆಗೂ, ನಗಿಸಲು ನೀವು ನಗುವೆವು ನಾವು ಎನ್ನುತ್ತಾನೆ ಪ್ರೇಕ್ಷಕ. ಆದರೆ, ಲೋ ಬಜೆಟ್, ರಘು ಅವರ ಕಾಸ್ಟ್ಯೂಮ್ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಚಿತ್ರದ ಮೈನಸ್ ಪಾಯಿಂಟ್.

ನೀತಿ, ನಿಯತ್ತು ಇರುವ ವ್ಯಕ್ತಿ ರಂಗ. ಆದರೆ, ಖಾದೀಮ್ ಮಾತ್ರ ಖದೀಮ. ಖಾದಿ ಹಾಕುವಷ್ಟು ಸಾಚಾ ಅಲ್ಲ. ಕೈಯಲ್ಲಿ ಶರಾಬು ಇದ್ದಾಗಲೂ 'ಸಚ್ ಬೋಲ್‌'ತಾ ಹೈ' ಎನ್ನುವದನ್ನು ಸೋಚ್ ಭೀ ನಹೀ ಸಕ್ತೇ. ಆದರೆ, ಇವರಿಬ್ಬರ ಮಿತ್ರವಾತ್ಸಲ್ಯ ಫಿಟ್ ಹೈ ಬಾಸ್ ಎನ್ನುವಂಥದ್ದು. ಮಾವನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುವ ರಂಗನದ್ದು ಹಳ್ಳಿಯಲ್ಲಿರುವ ಆಸ್ತಿ ಉಳಿಸಿಕೊಳ್ಳುವ ಹಾದಿ. ಆಗಾಗ 'ಮಾವನ ಮನೆ'ಗೆ ಹೋಗಿ ಬರುವ ಖಾದೀಮ್‌ಗೆ ಆಸ್ತಿವಂತಳಾದ ನಾಯಕಿಯನ್ನು ಒಲಿಸಿಕೊಳ್ಳುವ ಬುದ್ಧಿ. ಇಂಥ ಚಡ್ಡಿದೋಸ್ತ್‌'ಗಳು ಎಕ್ಸ್‌'ಛೇಂಜ್ ಆಫರ್‌'ನಲ್ಲಿ ನನ್ನ ಕೆಲಸ ನಿನ್ನದು, ನಿನ್ನ ಕೆಲಸ ನನ್ನದು ಎನ್ನುತ್ತಾ ತಮ್ಮ ಕಾರ್ಯಸಾಧಿಸುವುದು ಚಿತ್ರದ ಕಥೆ. ಬರೀ ನಗಿಸುವ ಕೆಲಸವನ್ನೇ ಮಾಡುವ ದೋಸ್ತ್‌ಗಳು ಇಂಟರ್‌ವಲ್ ಸಮಯದಲ್ಲಿ 'ನೀನು ನನ್ನ ಅಪ್ಪ ಇದ್ದಂಗೆ ಕಣೋ' ಎನ್ನುವಂಥ ಸಂಭಾಷಣೆಗಳಿಂದ ಒಂದಿಷ್ಟು ಅಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಡೈಲಾಗ್ ಓರಿಯೆಂಟೆಡ್ ಸಿನಿಮಾ ಆದ್ದರಿಂದ ಹಳ್ಳಿಯಲ್ಲಿ ಇಬ್ಬರೂ ಗೆಳೆಯರಾಗಿದ್ದರು ಎಂಬುದನ್ನು ಮಾತಿನಲ್ಲೇ ಹೇಳಿಸಲಾಗಿರುವುದರಿಂದ, ಯೇ ಅಂದರ್ ಕೀ ಬಾತ್ ಹೈ ಎಂದುಕೊಳ್ಳಬೇಕು. ಚಡ್ಡಿದೋಸ್ತ್ ಎಂಬ ಹೆಸರು ಕೇಳಿ ಇದನ್ನು ಆರೆಸ್ಸೆಸ್ ಸಿನಿಮಾ ಎಂದುಕೊಳ್ಳಬಾರದು ಎಂಬಂತೆ ಸಾಧು ಇಲ್ಲಿ ಮುಸ್ಲಿಂ ಆಗಿದ್ದಾರೆ. ಆದರೆ, ಇಬ್ಬರೂ ಬಾಯಿಬಡುಕರಾದರೂ ಹಿಂದೂ ಮುಸ್ಲಿಂ, ಭಾಯಿ ಭಾಯಿ ಎನ್ನುವುದನ್ನು ಮಾತಿಲ್ಲದೇ ಹೇಳಿ  ತೋರಿಸುತ್ತಾರೆ.    ಸಾಧು ಮಹಾರಾಜ್ ಎಂಬ ನಿಕ್‌ನೇಮ್ ಅನ್ನು ಸಮರ್ಥಿಸಿಕೊಂಡಿದ್ದಾರೆ ಸಾಧು ಕೋಕಿಲಾ. ರಘು ಇದ್ದಲ್ಲಿ ನಗು ಗ್ಯಾರಂಟಿ. ಆದರೆ ಇಲ್ಲಿ ನಗು ಜೊತೆಗೆ ಮಗುವಿನ ಮುಗ್ಧತೆಯೂ ಇರುವುದು ವಿಶೇಷ. ಹಾಗಾಗಿ ರಂಗನ ಪಾತ್ರದಲ್ಲಿ ಅವರು ಸೂಪರ್ರೋ 'ರಂಗ'. ಅಶ್ವಿನಿ ಕೂಡ ಪಾತ್ರಕ್ಕೆ ಬೇಕಾದ ಮುಖಭಾವ ಮತ್ತು ಮಾತುಕತೆಯಿಂದ ಇಷ್ಟವಾಗುತ್ತಾರೆ. ಹಾಗಾಗಿ, ರಘು ಅಶ್ವಿನಿ ಜೋಡಿ ಸೆನ್ಸಿಬಲ್ ಎನಿಸುತ್ತದೆ. 'ದೋಸ್ತ್‌'ಗಳ ಚಿತ್ರವಾದ ಕಾರಣಕ್ಕೆ ಯಾವುದಕ್ಕೂ ಇರಲಿ ಎಂಬಂತೆ ಸೇರಿಸಿಕೊಂಡಿರಬಹುದಾದ 'ಮಿತ್ರ' ಅವರದ್ದು ಮಿತಿಮೀರದ ಅಭಿನಯ. 'ಚೆಡ್ಡಿ'ದೋಸ್ತ್ ಸಿನಿಮಾದ 'ಬ್ರ್ಯಾಂಡ್ ನೇಮ್‌' ಆಗಿ ಮಿಂಚಿರುವ 'ರೂಪಾ'ಶ್ರೀಗೆ ಬಡ್ಡಿ ವಸೂಲಿ ಮಾಡುವುದೇ ಅಭಿನಯ. ಹಾಗಾಗಿ ಅವರನ್ನು 'ಬಡ್ಡಿ'ಂಗ್ ಸ್ಟಾರ್ ಎನ್ನಬಹುದು. ಕೈ ಕೊಡುವ ಪ್ರಿಯಕರನ ಪಾತ್ರದಲ್ಲಿ ನಿರ್ದೇಶಕ ಪಿ.ಸಿ.ಶೇಖರ್ 'ಫೋಟೋ'ಜೆನಿಕ್ ಅಭಿನಯ. ಅರ್ಜುನ್ ಜನ್ಯ ಸಂಗೀತ ಚಡ್ಡಿದೋಸ್ತ್‌ಗಳಿಗೆ ತಕ್ಕ ಡ್ಯುಯೆಟ್‌ನಂತಿದೆ.

- ಹರಿ, ಕನ್ನಡಪ್ರಭ

 

 

 

Add comment