FacebookTwitter

ಭಜರಂಗಿ ಚಿತ್ರ ವಿಮರ್ಶೆ

    User Rating:  / 5
    PoorBest 

ಕಲರ್ಪುಲ್, ಖದರ್ಫುಲ್

ಚಿತ್ರ: ಭಜರಂಗಿ
ಬಿಡುಗಡೆ: 12 ಡಿಸೆಂಬರ್ 2013

ಇತ್ತೀಚಿನ ಕೆಲವು ಚಿತ್ರಗಳ ಸೋಲಿನಿಂದ ನಿರಾಸೆಗೊಳಗಾಗಿದ್ದ ಶಿವರಾಜ್ ಕುಮಾರ್ ಅಭಿಮಾನಿ ದೇವರುಗಳಿಗೆ  ದೈವಾಂಶಭೂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಣ್ಣರ 'ಭಜರಂಗಿ' ಹೇಳಿ ಮಾಡಿಸಿದಂಥ ಚಿತ್ರ. ಒಂದು ದೊಡ್ಡ ಗೆಲುವು ಎಂಬ ಕನಸು ಬಹಳ ದಿನಗಳಿಂದ ಫ್ಯಾಂಟಸಿಯಾಗಿಯೇ ಉಳಿದಿದ್ದಕ್ಕೋ ಏನೋ ಹೆಚ್ಚು ಕಡಿಮೆ ಫ್ಯಾಂಟಸಿ ಚಿತ್ರವಾದ ಭಜರಂಗಿಯನ್ನು ಕೊಟ್ಟು ಅವರನ್ನು ತೃಪ್ತಿ ಪಡಿಸುವಲ್ಲಿ ನಿರ್ದೇಶಕ ಹರ್ಷ ಯಶಸ್ವಿಯಾಗಿದ್ದಾರೆ.

ಆದರೆ ಶಿವಣ್ಣರ ಭರ್ಜರಿ ಪ್ರದರ್ಶನದ ನಡುವೆಯೂ ಇದು ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ ಎಲ್ಲಾ ವರ್ಗದ ಜನರಿಗಾಗಿ ಮಾಡಿದ ಜನರಲ್ ಸಿನಿಮಾ ಎನಿಸಿಕೊಳ್ಳುವುದು ಭಜರಂಗಿ ವಿಶೇಷ.

ಭಜರಂಗಿಯ ಏಕೈಕ ನಿರಾಸೆ ಎಂದರೆ ಚಿತ್ರದ ಕಥೆ ಇತ್ತೀಚೆಗೆ ತೆರೆಕಂಡ ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ಹೋಲುತ್ತದೆ ಎಂಬುದು. ಆದರೆ ಅಲ್ಲಿ ಕಥೆಯ ಕ್ರೆಡಿಟ್ ಅನ್ನು ದುನಿಯಾ ಟಾಕೀಸ್ಗೆ ಕೊಡಲಾಗಿತ್ತು. ಬಹುಷಃ ಅದೇ ಟಾಕೀಸಿನ ಕೆಲವು ಗೇಟ್ ಕೀಪರ್ಗಳು ಈ ತಂಡದಲ್ಲೂ ಇದ್ದರೋ ಏನೋ, ಅಂತೂ 'ಜಯಮ್ಮನ ಎರಡನೇ ಮಗ' ಎನಿಸುವಷ್ಟರ ಮಟ್ಟಿಗೆ ಅದರ ತದ್ರೂಪು ಈ ಭಜರಂಗಿ. ಅದಕ್ಕಿಂತ ತಡವಾಗಿ ಬಂದಿರುವುದರಿಂದ ಇದನ್ನು ಜಯಮ್ಮನ ಕಿರಿ ಮಗ ಅಂತೀರೋ, ಶಿವರಾಜ್'ಕುಮಾರ್ರಂಥ ಸೀನಿಯರ್ ನಟ ಇರುವ ಕಾರಣಕ್ಕೆ ಜಯಮ್ಮನ ಹಿರಿ ಮಗ ಅಂತೀರೋ ನಿಮಗೆ ಬಿಟ್ಟಿದ್ದು. ಆದರೆ ಭಜರಂಗಿಯಲ್ಲಿ ಅಮ್ಮನಿಗೆ ಪ್ರಾಮುಖ್ಯತೆ ಕಡಿಮೆ ಎಂಬುದಷ್ಟೇ ವ್ಯತ್ಯಾಸ. ಚಿತ್ರದ ನಾಯಕ ಅಲ್ಲಿ ಕಾಳಿದಾಸ, ಇಲ್ಲಿ ಪವನ ಪುತ್ರ ಹನುಮ. ಹಾಗಾಗಿ ಭಜರಂಗಿಯನ್ನು 'ಪವನ್'ಸ್ಟಾರ್ ಎನ್ನಲೂಬಹುದು. ಸೂಪರ್ ನ್ಯಾಚುರಲ್ ಪವರ್ ಕಥೆ ಹೊಂದಿದ ಸಿನಿಮಾ ಆದ್ದರಿಂದ 'ಹನುಮ್ಯಾನ್' ಎನ್ನಬಹುದು. ಚಿತ್ರದ ಮೊದಲರ್ಧದ ಎಪಿಸೋಡ್ ತೆಲುಗಿನ 'ಕಲೇಜಾ' ಚಿತ್ರದ ನೆರಳಿದೆ ಎನಿಸಿದರೂ, ಅದಕ್ಕೆ ಓಪನ್ 'ಹಾರ್ಟ್' ಸರ್ಜರಿ ಮಾಡಿರುವ ಚಿತ್ರಕಥಾ ತಂಡ ಮನರಂಜನೆಗೆ ಮೋಸ ಮಾಡಿಲ್ಲ. ಆದರೆ ಇಡೀ ಚಿತ್ರಕ್ಕೆ ನಿರ್ದೇಶಕ ಹರ್ಷ ಮಾಡಿರುವ ಓಪನ್ 'ಆರ್ಟ್' ಸರ್ಜರಿ ಮಾತ್ರ ಭರ್ಜರಿಯಾಗಿದೆ.

ಜಾಲಿಬಾಯ್ನಂತೆ ಹಾಯಾಗಿದ್ದ ನಾಯಕ 'ನೀನು ಸಾಮಾನ್ಯ ಮನುಷ್ಯನಲ್ಲ' ಎಂಬ ರಹಸ್ಯ ಕೇಳಿದ ಮೇಲೆ ತನ್ನ ಫ್ಲ್ಯಾಷ್ಬ್ಯಾಕ್ ತಿಳಿದುಕೊಳ್ಳುತ್ತಾನೆ. ಆನಂತರ ಚಿತ್ರದ ನಾಯಕ ಮತ್ತು ಚಿತ್ರ ಎರಡೂ ಅಸಾಮಾನ್ಯ ಎನ್ನುವ ಮಟ್ಟಕ್ಕೆ ಶಿಫ್ಟ್. ರಾಮನ ಭಂಟ, ಊರಿಗೆ ನೆಂಟ ಎನ್ನುವ ನಾಯಕನ ಅಜ್ಜ ಭಜರಂಗಿಯ ಕತೆ ತೆರೆದುಕೊಂಡ ಮೇಲೆ ತೆರೆತುಂಬ ಹಬ್ಬ. ಭಜರಂಗಿಯ ಕಥೆಯಲ್ಲಿನ ಸಂಭಾಷಣೆ ಒಂದಿಷ್ಟು ಖಡಕ್ ಆಗಬಹುದಿತ್ತು, ರಾಣಾ ಎಂಬ ವಿಲನ್ ಎಪಿಸೋಡ್ ಕೊಂಚ ಉದ್ದ ಆಯ್ತು, ಅಲ್ಲಿ ಶಿವಣ್ಣ ಮಿಸ್ಸಿಂಗ್, ಎನಿಸುವ ಸಣ್ಣ ಪುಟ್ಟ ವಿಷಯಗಳನ್ನು ಬಿಟ್ಟರೆ ಹೆಚ್ಚಿನ ನಿರಾಸೆ ಇಲ್ಲ. ಭಜರಂಗಿಯ ವೇಷಭೂಷಣ, ಅಬ್ಬರ, ಅವನ ಪೂರ್ವಜರ ಸಂತತಿ, ವಿಲನ್ಗಳ ವಿಕೃತಿ, ಎಲ್ಲವೂ ಅದ್ಭುತ. ಕೊನೆಗೆ ವಿಲನ್ಗಳ ಪಾಪದ ಕೊಡ ತುಂಬುವಷ್ಟರಲ್ಲಿ ಅಭಿಮಾನಿಗಳ ಹೃದಯವೂ ತುಂಬಿಬರುತ್ತದೆ. ಕ್ಲೈಮ್ಯಾಕ್ಸ್ನಲ್ಲಿನ ಶಿವಣ್ಣರ ಸಿಕ್ಸ್ ಪ್ಯಾಕ್, ಐಸಿಂಗ್ ಆನ್ ದಿ ಕೇಕ್. ಕೈಯಲ್ಲಿ ಮಚ್ಚೇ ಇರಲಿ, ಕತ್ತಿಯೇ ಇರಲಿ, ಅದನ್ನು ಹಿಡಿಯೋ 'ಠೀವಿ ರೈಟ್ಸ್' ಕೇವಲ ಶಿವರಾಜ್ ಕುಮಾರ್ ಬಳಿಯಲ್ಲೇ ಇದೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಎಲ್ಲರೂ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಹಾತೊರೆಯುವಾಗ ಶಿವಣ್ಣ, ಬ್ಯಾಡ್ಲಕ್ ಬಾದ್ಶಾ ಎಂದು ಕರೆಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೀಟರ್ ತೋರಿಸಿರುವುದು ಸ್ಪೆಷಲ್. ಇಡೀ ಸಿನಿಮಾ ನನ್ನ ಮೇಲೆ ನಿಂತಿದೆ ಎಂಬ ಅರಿವಿಟ್ಟುಕೊಂಡೇ ಶಿವಣ್ಣ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಐಂದ್ರಿತಾ ರೇ ಅಪರೂಪಕ್ಕೆಂಬಂತೆ ಅಭಿನಯದಲ್ಲೂ ಮಿಂಚಿದ್ದಾರೆ. ರಾಣಾ ಪಾತ್ರಧಾರಿ ನಡುಕ ಹುಟ್ಟಿಸುತ್ತಾರೆ. ಹನುಮನ ಮುಂದೆ ಕೃಷ್ಣನನ್ನು ಭಜಿಸುವ ಕೃಷ್ಣೆಯಾಗಿ ರುಕ್ಮಿಣಿ ಕಾಡುತ್ತಾರೆ.

ಭಜರಂಗಿ ವೈಭವಕ್ಕೆ ಇನ್ನಷ್ಟು ಕಳೆತಂದಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಅವರ ಹಾಡುಗಳಲ್ಲಿರುವಷ್ಟೇ ಜೋಷ್ ರೀರೆಕಾರ್ಡಿಂಗ್ನಲ್ಲೂ ಇದೆ. ಜೈ ಆನಂದ್ ಕ್ಯಾಮರಾದಲ್ಲಿ ಭಜರಂಗಿ ಕಲರ್ಫುಲ್ ಮತ್ತು ಖದರ್ಫುಲ್.

-ಹರಿ, ಕನ್ನಡಪ್ರಭ

 

 

 

Add comment