FacebookTwitter

ದ್ಯಾವ್ರೇ ಕನ್ನಡ ಚಿತ್ರ ವಿಮರ್ಶೆ

    User Rating:  / 1
    PoorBest 

ಗೋಡೆಗಳಿಗೆ ಹೃದಯವೂ ಇರುತ್ತದೆ

ಚಿತ್ರ: ದ್ಯಾವ್ರೇ
ಬಿಡುಗಡೆ: 06 ಡಿಸೆಂಬರ್ 2013

'ದ್ಯಾವ್ರೇ' ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಗೆ 'ಇದೂ ಒಂದ್ ಸಿನಿಮಾನಾ?' ಎನ್ನಿಸಬಹುದು!. ಅದಕ್ಕೆ ಕಾರಣ ಗಡ್ಡ ವಿಜಿ ನಿರ್ದೇಶನದ ಈ ಚಿತ್ರ 'ಇದು ಸಿನಿಮಾ ಅಲ್ಲ, ಲೈಫು' ಎನಿಸುವಷ್ಟು ಸಹಜ ಮತ್ತು ಆಪ್ತವಾಗಿರುವುದು.

ಇಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತರಬಲ್ಲ ಏಕೈಕ ಸ್ಟಾರ್ ಎಂದರೆ ಯೋಗರಾಜಭಟ್. ಆದರೆ, ದ್ಯಾವ್ರೇ ಚಿತ್ರದ ಮೂಲಕ 'ಯಾರು ಕತೆ ಹೇಳ್ತೀವಿ ಅಂತ ಬರ್ತಾರೋ ಅವರತ್ರ ಕತೆಯಿರಲ್ಲ, ಯಾರು ಸುಮ್ನೆ ಕೂತಿರ್ತಾರೋ ಅವರತ್ರ ಕಥೆ ಇರುತ್ತೆ' ಎನ್ನುವ ಚಿತ್ರದ ಸಂಭಾಷಣೆ ಗಾಂಧಿನಗರಕ್ಕೂ ಅನ್ವಯಿಸುತ್ತದೆ ಎಂದಿದ್ದಾರೆ ವಿಜಿ.

ನಾನೊಬ್ಬನೇ ಇಲ್ಲಿ ಪರ್ಮನೆಂಟ್ ಖೈದಿ, ಇವರೆಲ್ಲ ಬಂದುಹೋಗುವವರು ಅಷ್ಟೆ ಎನ್ನುತ್ತಾರೆ ಜೈಲರ್ ಪಾತ್ರಧಾರಿ ಯೋಗರಾಜಭಟ್. ಆದರೆ ಚಿತ್ರದ ಪಾತ್ರಗಳಲ್ಲಿ ಬಂದು ಹೋಗುವಂಥವರು ತೀರಾ ಕಡಿಮೆ. ಆದರೂ ಇಲ್ಲಿ ಹಲವರು ಬರ್ತಾರೆ, 'ಹೋಗ್ತಾರೆ'. ಈ ಬಂದು 'ಹೋಗುವವರ' ಕಥೆಯೇ 'ದ್ಯಾವ್ರೇ'.

ಇದು ಖಂಡಿತ ಕಲರ್‌'ಫುಲ್ ಸಿನಿಮಾ ಅಲ್ಲ. ಬಿಳಿ ಬಟ್ಟೆ ತೊಟ್ಟ ಖೈದಿಗಳ ಜೈಲಿನ ಗೋಡೆಗಳ ನಡುವಿನ ಶ್ವೇತ ಸಾಮ್ರಾಜ್ಯ. ಬದುಕಿನಲ್ಲಿ ಸೋತವರ ಸಾಮ್ರಾಜ್ಯ. ಅದೇ ಜೈಲಿನ 'ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ' ಎನ್ನುವಂಥ ಜೈಲರ್, ಯೋಗರಾಜಭಟ್. ಪಾಪಿಗಳನ್ನೂ ಪಾಪುಗಳು ಎಂಬಂತೆ ನೋಡುವ ಪುಣ್ಯಾತ್ಮ, ಈತ.

ಗೋಡೆ ಬಿದ್ದಾಗ ಹಾರಿಕೋ ಎನ್ನುವ ಪಾಲಿಸಿ ಇಟ್ಟುಕೊಂಡು ಕಾಯುವ, ಕಂಡಕಂಡಲ್ಲಿ ಕಿಂಡಿ ಹುಡುಕುವ, ಖೈದಿಗಳ ಅಂದರ್ ಬಾಹರ್ ಆಟದಲ್ಲಿ ಜೈಲರ್ ಕೂಡ ಪಾತ್ರಧಾರಿ. ಆದರೆ ಖೈದಿಗಳು ತಪ್ಪಿಸಿಕೊಂಡು ಹೊರಗೆ ಹೋದಮೇಲೆ ಕಂಡಲ್ಲಿ ಗುಂಡು ಆದೇಶ. ಖೈದಿಗಳ ಅವಶೇಷ. ಬದುಕಿನ ಯೋಚನೆ ಮತ್ತು ಸಾವಿನ ಯೋಜನೆ. ಕೊನೆಗೆ, ಕಿಂಡಿ ಹುಡುಕುವ ಖೈದಿಗಳ ಜಾಗದಲ್ಲಿ ಕಂಬಿಯ ಹಿಂದೆ ನಿಂತ ಜೈಲರ್. ಈ ಜೈಲರ್‌ನ ನೆನಪಿನ ಅಂಗಳದಲ್ಲಿ 'ದ್ಯಾವ್ರೇ' ಚಿತ್ರ ಅರಳಿದೆ.

ಚಿತ್ರದ ಮೊದಲರ್ಧದ ನಿರೂಪಣೆಯಲ್ಲಿ ಜೈಲಿಗೆ ಬಂದ ಖೈದಿಗಳನ್ನೆಲ್ಲಾ ಪರಿಚಯಿಸುವ 'ಸ್ವಾಗತ' ಭಾಷಣ. ಅದರ ಮಧ್ಯೆ ಆಯಾ ಖೈದಿಗಳ 'ಸ್ವಗತ'. ದ್ವಿತೀಯಾರ್ಧದಲ್ಲಿ ಅವರೆಲ್ಲರಿಗೂ 'ಬೀಳ್ಕೊಡುಗೆ' ಸಮಾರಂಭ. ಆದರೆ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕ ಗಡ್ಡ ವಿಜಿ ಉಣಬಡಿಸಿರುವ ಅಡುಗೆ ಮಾತ್ರ ಬಾಯಲ್ಲಿ ಅಲ್ಲ, ಕಣ್ಣಲ್ಲೂ ನೀರೂರಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಇರುವ ವಿಷಯವನ್ನು ಹೇಳುವಾಗ ಸಮಾಜ,

ವ್ಯವಸ್ಥೆಗಳನ್ನು ಮಿತಿಯಲ್ಲಿರಿಸಿ ಮನುಷ್ಯತ್ವದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದಾರೆ ವಿಜಿ. ಗೋಡೆಗಳಿಗೆ ಕಿವಿಗಳಿವೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಗೋಡೆಗಳಿಗೆ ಹೃದಯವೂ ಇರುತ್ತದೆ ಎನ್ನುತ್ತದೆ ದ್ಯಾವ್ರೇ ಚಿತ್ರ. ಈ ಕಾರಣಕ್ಕೆ ವಿಜಿ ಅವರನ್ನು ಗಾಡ್ ಬ್ಲೆಸ್ಡ್ ಡೈರೆಕ್ಟರ್ ಎನ್ನಬಹುದು.

ಗುರುಪ್ರಶಾಂತ್ ರೈ ಛಾಯಾಗ್ರಹಣದಲ್ಲಿ ಕತೆಗೆ ತಕ್ಕ ಸಹಜತೆ ಇದೆ. ವೀರಸಮರ್ಥ್ ಸಂಗೀತದ ಎಲ್ಲ ಹಾಡುಗಳು ದ್ಯಾವ್ರೇ ಚಿತ್ರಕ್ಕೆ ನಿಜವಾದ ಭಕ್ತಿಗೀತೆಗಳಂತೆ ಜೊತೆಯಾಗಿವೆ.

ದೇವ್ರು ಅಂದ್ರೆ ಅವನೊಬ್ಬ ಬಂಗಾರದ ಮನುಷ್ಯ ಎನಿಸುವಂತೆ ಮಾಡುವ ಪಾತ್ರದಲ್ಲಿ ಯೋಗರಾಜಭಟ್,  ಅಭಿಮಾನಿ ದ್ಯಾವ್ರುಗಳನ್ನಷ್ಟೇ ಮೆಚ್ಚಿಸದೆ ಹೊಸ ಅಭಿಮಾನಿಗಳನ್ನೂ ಸೃಷ್ಟಿಸಿಕೊಂಡಿದ್ದಾರೆ. ಪೆಟ್ರೋಲ್ ಪ್ರಸನ್ನರ ನೆರಳು 'ಸಾರ್, ನಾನು ಒಳ್ಳೆಯವನು ಅಂತ ನೀವು ಹೇಳಲೇ ಇಲ್ಲ' ಎಂದಾಗ, 'ನೀನು ದ್ಯಾವ್ರಂಥವನು ಕಣೋ...' ಎನ್ನುವ ಭಟ್ಟರ ಪ್ರಶಾಂತತೆ, 'ಜೀವನದಲ್ಲಿ ನಂಬಿಕೆ ಮುಖ್ಯ....ನಂಬ್ರಲೇ'...ಎನ್ನುವಾಗಿನ ಅಶಾಂತತೆ ಎರಡೂ ಅದ್ಭುತ.

ಈ ಪ್ರಪಂಚದಲ್ಲಿ ಕಿಂಡಿ ಇಲ್ದೇ ಇರೋ ಜಾಗಾನೇ ಇಲ್ಲ ಎನ್ನುವ ಪೆಟ್ರೋಲ್ ಪ್ರಸನ್ನ, ನಿನ್ ಜೊತೆ ನಾನೂ ಸಾಯಬೇಕಿತ್ತು ಎನ್ನುವ ಮಾತನ್ನು ಆಡಿ ತೋರಿಸದೇ 'ಮಾಡು ಮತ್ತು ಮಡಿ' ಎಂಬ ಪಾಲಿಸಿಯ ಚೇತನ್, ಮನುಷ್ಯರನ್ನು ಕತ್ತರಿಸಿ ಜೈಲಿಗೆ ಬಂದ ಅರಸುಗೆ, ಖೈದಿಗಳಿಗೆ ಬ್ಯಾಂಡೇಜ್ ಹಾಕುವಾಗ ಅರಿವಾಗುವ ಹ್ಯೂಮನ್ ಬಾಂಡೇಜ್, ಒಳ್ಳೆಯ ಅಭಿನಯ ಮಾಡೋಕೆ ಹೆಚ್ಚು ಸಂಭಾಷಣೆ ಇರಲೇಬೇಕಿಲ್ಲ ಎಂದು ನಿರೂಪಿಸಿರುವ ರಾಜೇಶ್ ನಟರಂಗ, ಬಿಡಿ ಬಿಡಿ ಪದ ಆಡಿ ಆಡಿ ಮರುಳು ಮಾಡುವ ಸತೀಶ್ ನೀನಾಸಂ, ಮಚ್ಚಲ್ಲಿ ಕೊಚ್ಚೋದಿಲ್ಲ ಗನ್ನಲ್ಲೇ ಎಲ್ಲ ಎನ್ನುವ ಎನ್‌'ಕೌಂಟರ್ ಸತ್ಯ, ಸೋನು, ಸೋನಿಯಾ ಗೌಡ, ಶೃತಿ, ಎಲ್ಲರೂ ದ್ಯಾವ್ರಿಗೆ ತಮ್ಮ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ.

- ಹರಿ, ಕನ್ನಡಪ್ರಭ

 

 

 

Add comment