FacebookTwitter

ಗಾಲಿ ಚಿತ್ರ ವಿಮರ್ಶೆ

    User Rating:  / 1
    PoorBest 

ತಿರುಗುವ ತನಕ ಚಕ್ರ, ಇದುವೇ 'ಜೀವನ' ಚಿತ್ರ

ಚಿತ್ರ: ಗಾಲಿ
ಬಿಡುಗಡೆ: 20 ಡಿಸೆಂಬರ್ 2013

'ಮುಗಿದು ಹೋಗಿರುವ ಕಥೆಯನ್ನು ಬರೆಯಲು ಕೂತಿರುವೆ ನಾನು' ಎನ್ನುತ್ತದೆ 'ಗಾಲಿ' ಹಾಡಿನ ಸಾಲೊಂದು.

ಇದೇನಪ್ಪಾ ಗಾಲಿ ಅಂದ್ರೆ ಬರೀ ಗಲೀಜು ಮಾತುಗಳಿರುವ ಸಿನಿಮಾ ಅಂದ್ಕೊಂಡವರಿಗೆ 'ಗಲಿ ಮೇ ಆಜ್ ಚಾಂದ್ ನಿಕ್ಲಾ' ಎನ್ನುವಂಥ ಶಾಕ್. ಗಾಲಿಮಾತುಗಳಲ್ಲಿ ಬರಿ ಪೋಲಿ ಮಾತಷ್ಟೇ ಅಲ್ಲ, ಗಾಲಿಬ್'ನ ಗಜಲ್'ನಂತಹ ಸಾಲುಗಳೂ ಇವೆ, ಪಜಲ್'ನಂತೆ ಕೇಳಿಸುವ ಉದ್ದುದ್ದ ಸಾಯಿಕುಮಾರ್ ಶೈಲಿಯ 'ಗಾಲೀ' ಪದಗಳೂ ಇವೆ. ಇಲ್ಲಿ ಮಂಕುತಿಮ್ಮನ ಕಗ್ಗವೂ ಕೇಳಿಸುತ್ತದೆ. ಆದರೂ 'ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ' ಎನ್ನುವ ಹಾಡೇ ಪ್ರೇಕ್ಷಕರಿಗೆ ನೆನಪಾಗುತ್ತದೆ.

ಆಗಾಗ ಇಂಥ ಚಿತ್ರಗಳು ಬರುವುದುಂಟು. ಬರೀ ಆಶಯ ಚೆನ್ನಾಗಿದ್ದರೆ ತಮ್ಮದು ಒಳ್ಳೆ ಸಿನಿಮಾ ಆಗಿಬಿಡುತ್ತದೆ ಎಂಬ ಭ್ರಮೆಯಲ್ಲಿರುವವರ ಚಿತ್ರ ಇದು. ಹಾಗಾಗಿ ಇದು ರೆಗ್ಯುಲರ್ ಗಾಂಧಿನಗರದ ಸಿನಿಮಾ ಅಲ್ಲ. ಗಾಂಧಿನಗರಕ್ಕೆ ಏನೂ ಅರಿಯದ ಅಮಾಯಕರು ಬಂದು 'ಪಾಪ ಅವನು ಗಾಂಧಿ' ಎನಿಸಿಕೊಳ್ಳುವವರ ಚಿತ್ರ. ಆದರೆ, ಜೀವನದಲ್ಲಿ ಕಷ್ಟಪಟ್ಟಿದೀನಿ ಅನ್ನೋದು ಯಶಸ್ಸು ಗಳಿಸೋಕೆ ಕ್ವಾಲಿಫಿಕೇಶನ್ ಆಗಲ್ಲ ಎನ್ನುವ ಕ್ಲಾರಿಫಿಕೇಶನ್ ನಿರ್ದೇಶಕ ಲಕ್ಕಿ ಅವರಿಗೆ ಅಗತ್ಯ.

ಡಬಲ್ ಮೀನಿಂಗ್ ಸಂಭಾಷಣೆಗಾಗಿ ಗಾಲಿ ನೋಡಬೇಕು ಎಂದುಕೊಂಡವರು ಮನೆಯಲ್ಲೇ ಕೂತು ಟ್ರೈಲರ್ ನೋಡುವುದು ವಾಸಿ. ಚಿತ್ರಮಂದಿರದಲ್ಲಿ ಸೆನ್ಸಾರ್ ಕಡೆಯಿಂದ ಬರೀ ಬೀಪ್ ಸೌಂಡ್'ಗಳು ಮತ್ತು ಬದಲಾದ ಸಂಭಾಷಣೆಗಳೇ ಕೇಳಿಸುತ್ತವೆ. ಹಾಗಾಗಿ, ಗಾಲಿಯನ್ನು ಹಿಡಿಯೋರು ಎಲ್ಲೂ ಇಲ್ಲ ಎನ್ನುವಂತಿಲ್ಲ. ಟ್ರೈಲರ್'ನಲ್ಲಿದ್ದ ಸಚಿನ್ ಹೆಸರು ಬಿಟ್ಟು ಪಾಂಟಿಂಗ್ ಅವರ ಹೆಸರು ಬಳಸಲಾಗಿದೆ. ಸಚಿನ್ ಬೇಡ, ಪಾಂಟಿಂಗ್ ಆದ್ರೆ ಹೆಂಗೆ ಬೇಕಾದ್ರೂ 'ಆಡಿಕೊಳ್ಳಬಹುದು' ಎನ್ನುವ ಸೆನ್ಸಾರ್ ಮಂಡಳಿಯ ಧೋರಣೆ ಇಂಟರೆಸ್ಟಿಂಗ್.

ಎಲ್ಲಾ ನಿರ್ದೇಶಕರೂ ತಮ್ಮ ಮೊದಲ ಚಿತ್ರದಲ್ಲಿ ತಮ್ಮ ಕೆಲವು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದು ಕಾಮನ್. ಆದರೆ ಲಕ್ಕಿ ಸಂಪೂರ್ಣವಾಗಿ 'ಕಥೆ ಹೇಳುವೆ ನನ್ನ ಕಥೆ ಹೇಳುವೆ' ಎನ್ನುವ ತಂತ್ರಕ್ಕೇ ಶರಣಾಗಿದ್ದಾರೆ. ನಿರ್ಮಾಪಕರ ಬಳಿ ಕಥೆ ಹೇಳಲು ಹೋಗಿ ಅವಮಾನ ಮಾಡಿಸಿಕೊಂಡ ಕಥೆ ಹೇಳಿಕೊಂಡು, ಕೊನೆಗೆ ತಮ್ಮ ಸಿನಿಮಾದಲ್ಲೇ ಯಶಸ್ವಿ ನಿರ್ದೇಶಕ ಎನಿಸಿಕೊಂಡು ಅವರೆಲ್ಲ ಬಂದು ತನ್ನನ್ನು ಓಲೈಸಿದಂತೆ ಕನಸು ಕಂಡು ನಿಟ್ಟುಸಿರುಬಿಟ್ಟಿದ್ದಾರೆ. ಬೇಸಾಯಕ್ಕೆ ಗೋಲಿ ಮಾರೋ ಎಂದು ಹಳ್ಳಿ ಬಿಟ್ಟು ಬಂದ ಹುಡುಗ ಸಿನಿಮಾ ನಿರ್ದೇಶಕನಾಗಲು ಯತ್ನಿಸುತ್ತಾನೆ. ಎಲ್ಲ ನೀತಿಗಳನ್ನು ಗಾಳಿಗೆ ತೂರಿ ಪರಭಾಷೆಯ ಸಿನಿಮಾ ಸಿಡಿ ನೋಡಿ 'ಸಿಡಿ'ಗನ್ನಡಂ ಗೆಲ್ಗೆ' ಸಂಸ್ಕೃತಿಯ ಸಿನಿಮಾ ಮಾಡುವವರ ಬಗ್ಗೆ ಕೆಂಡಕಾರುತ್ತಾನೆ. ಹಲವು ಅವಮಾನಗಳ ನಂತರ, ಲೋ ಶುಗರ್ ಆದಾಗ ಚಾಕ್ಲೇಟ್ ಕೊಟ್ಟಿದ್ದನ್ನೇ ನೆಪವಾಗಿಟ್ಟುಕೊಂಡ ನಾಯಕನ ಗೆಳೆಯ ಒಬ್ಬ ನಿರ್ಮಾಪಕನಿಗೆ ಬಿಸ್ಕೆಟ್ ಹಾಕಿದ ಮೇಲೆ ಈ ಹಳ್ಳಿ ಹುಡುಗ ಸಿನಿಮಾ ರೈಟರ್, ಡೈರೆಕ್ಟರ್ ಆಗುತ್ತಾನೆ. ಡೈರೆಕ್ಟರ್ ಆದೋನು, ಹೀರೋ ಆಗ್ದೇ ಇರ್ತಾನಾ? ಸೋ, ಗಾಲಿ ಬಂದಾಗ ತೂರಿಕೋ ಎನ್ನುವಂತೆ ನಾಯಕನೂ ಆಗುತ್ತಾನೆ. ಗಾಲಿಗೆ ಕೆಲಸ ಇಲ್ಲ ಉರುಳುತ್ತದೆ, ಹುಡುಗನಿಗೆ ಕೆಲಸ ಇದೆ ಆದ್ರೂ ನರಳುತ್ತಾನೆ. ಕೊನೆಗೆ ಸಿನಿಮಾ ಗೆದ್ದರೂ ಬೇಸಾಯಕ್ಕೆ ಹೊರಳುತ್ತಾನೆ, ಮರಳುತ್ತಾನೆ. ಹಾಗಾಗಿ, ಏನೇ ಆಗಲಿ, 'ಮೊದಲು ರೈಟರ್ರಾಗಿ, ಆಮೇಲೆ ರೈತರಾಗಿ' ಎನ್ನುವ ಸಿನಿಮಾ ಇದು. ನಾಯಕ 'ಜೀವನ್' ಈ ಸಿನಿಮಾದಿಂದ ನಂಗೆ 'ಲೈಫ್' ಸಿಗುತ್ತೆ ಅಂದ್ಕೊಂಡ್ರೆ ಅದು ಅವರ ಇನ್ನೊಂದು ತಪ್ಪು. ಪಾಯಿಂಟ್ ಟು ವರಿ ಎನ್ನುವ ವಿಷಯ ಎಂದರೆ ಅವರ ಡೈಲಾಗ್ ಡೆಲಿವರಿ. 'ಸಿನಿಮಾದಲ್ಲಿ ಹೀರೋ' ಆದರೂ ವಿಲನ್ ಎನಿಸುವ ಅಭಯ ಸಿಂಹ, ಡೈಲಾಗ್ ಹೇಳುವ ಶೈಲಿಯನ್ನೇ ನೆಚ್ಚಿಕೊಂಡ ರೂಪಾ ನಟರಾಜ್, ಗೆಳೆಯ ಸುನಿಲ್ ಎಲ್ಲರೂ ಗಾಲಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಸಂಗೀತಕ್ಕಿಂತ ಸಾಹಿತ್ಯ ಲೇಸು, ಕ್ಯಾಮರಾ ಕೆಲಸದ ಬಗ್ಗೆ ಮಾತನಾಡದಿರುವುದೇ ಲೇಸು. ಅವರಿವರನ್ನು ಓಲೈಸುವ, ಕೆಲವರನ್ನು ತೆಗಳುವುದಕ್ಕೇ ಟೈಮ್ ವೇಸ್ಟ್ ಮಾಡುತ್ತ, 'ಸಿಂಪಲ್ ಲವ್ ಸ್ಟೋರಿಗೆ ಡಬಲ್ ಮೀನಿಂಗ್ ಡೈಲಾಗ್ ಬೇಕಿತ್ತು, ನಿಂದು ಸ್ಟ್ರಾಂಗ್ ಲವ್'ಸ್ಟೋರಿ' ಎನ್ನುತ್ತದೆ ಚಿತ್ರದ ಒಂದು ಸಂಭಾಷಣೆ. ಆದರೆ ಗಾಲಿ ಸಿನಿಮಾದಲ್ಲಿರುವುದೇ ತೀರಾ ವೀಕ್ ಸ್ಟೋರಿ. ಆದರೆ ಅದು ಎಷ್ಟು 'ವೀಕ್' ಓಡುವ ಸ್ಟೋರಿ ಎಂಬುದು ಮಾತ್ರ ಗಾಲಿ ಚಿತ್ರದ ಬಗ್ಗೆ ಆಡುವ ಗೇಲಿ ಮಾತಲ್ಲ.

- ಹರಿ, ಕನ್ನಡಪ್ರಭ

 

 

 

Add comment