FacebookTwitter

ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ

    User Rating:  / 2
    PoorBest 

ಚಿತ್ತಾರ ಮಂದಿರದಲ್ಲಿ ಮಳೆ ಮತ್ತು 'ಮಂಜು'

ಚಿತ್ರ: ಶ್ರಾವಣಿ ಸುಬ್ರಮಣ್ಯ
ಬಿಡುಗಡೆ: 27 ಡಿಸೆಂಬರ್ 2013

ಲಂಗ ದಾವಣಿ ಹಾಕುವ ವಯಸ್ಸಲ್ಲಿ ಯಾರದ್ದೋ ಮೋಡಿಗೆ ಸಿಲುಕಿ ಮನೆ ಬಿಟ್ಟು ಓಡಿ ಹೋಗುವ ಶ್ರಾವಣಿ, ಹುಡುಗಿ ಜೊತೆಯಲ್ಲಿ ಒಂದೇ ಮನೆಯಲ್ಲಿದ್ದು ಅವಳ ಮನಸ್ಸಿಗೆ ಮಾತ್ರ ಹತ್ತಿರವಾಗುವ ಸಭ್ಯ 'ಶುಭ್ರ'ಮಣ್ಯರ ಪ್ರೇಮಕಥೆ ಇದು.

ಚಿತ್ರದ ಆರಂಭದಲ್ಲಿ ಗಣೇಶ ಅಲಿಯಾಸ್ ಸುಬ್ರಮಣ್ಯ, ಅಮೂಲ್ಯರ ಪ್ರೇಮಕಥೆ ನಿರೀಕ್ಷಿಸಿದವರಿಗೆ ಅಮೂಲ್ಯ ಬೇರೊಬ್ಬ ಹುಡುಗನನ್ನು ಪ್ರೀತಿಸಿ ಓಡಿಹೋಗುವ ಕಥೆ ಅಚ್ಚರಿ ಮೂಡಿಸುತ್ತದೆ. ಅಪ್ಪನ್ ಕಾ ಛಾಯ್ಸ್'ಕಿಂತ ಅಪುನ್ ಕಾ ಛಾಯ್ಸ್ ಹುಡುಗನನ್ನೇ ಮದುವೆ ಆಗಬೇಕು ಎಂದು ಓಡಿಹೋಗುತ್ತಾಳೆ ಶ್ರಾವಣಿ. ಅವನು ಅಪಾಪೋಲಿ. ಹಾಗಾಗಿ ಈ ಶ್ರಾವಣಿ ದೋಷದಿಂದಾಗಿ ಅಪ್ಪ ಅಮ್ಮ ಅವಳನ್ನು ಮನೆಯಿಂದಲೂ ಓಡಿಸುತ್ತಾರೆ. ಆದರೆ, ನಾಯಕ ಗಣೇಶ್ ನಾಯಕಿಯ ಮನೆಯಲ್ಲೇ ಝಂಡಾ ಹೂಡಿ ಚಿತ್ರದ ಕೊನೆಯವರೆಗೂ ನಾನೇ ಅವಳ ಗಂಡ ಎಂದು ಸುಳ್ಳು ಹೇಳಿಕೊಂಡು ಮ್ಯಾನೇಜ್ ಮಾಡುತ್ತಾನೆ ಎಂದುಕೊಂಡರೆ ಅದು ತಪ್ಪು, ಅಥವಾ ಅವನೇ ನಾಯಕಿಯನ್ನು ಮ್ಯಾರೇಜ್ ಆಗುತ್ತಾನೆ ಎಂದುಕೊಂಡರೆ ಅದೂ ತಪ್ಪು. ಆಕೆ ನಾಯಕ ಸುಬ್ರಮಣ್ಯನ ಜೊತೆ ಮೈಸೂರಿಗೆ ಓಡಿ ಬರುತ್ತಾಳೆ. ಈ ಓಟದಲ್ಲಿ ಸಿನಿಮಾ ರನ್ನಿಂಗ್ ಸಕ್ಸಸ್'ಫುಲಿ ಎನಿಸುತ್ತದೆ.

ಚೆಲುವಿನ ಚಿತ್ತಾರದಲ್ಲಿ ಗಣೇಶ್, ಅಮೂಲ್ಯರ ಜಗಳ ನೋಡಿದ್ದ ಜನಗಳಿಗೆ ಇಲ್ಲಿ ಅದೇ ಟ್ರೀಟ್ ಮುಂದುವರೆದಿದೆ. ಈ ಇಬ್ಬರ ಜಗಳ ನಿರ್ದೇಶಕರಿಗೆ ಲಾಭ ಆಗಿದೆ ಎನ್ನಬಹುದು. ಇದರ ಜೊತೆಗೆ ಮುಂಗಾರು ಮಳೆಯ ಹನಿಗಳೂ ಜಿನುಗುತ್ತವೆ. ನಾಯಕಿ ಮನೆಯಲ್ಲಿ ನಿಂಬೆ ಗಿಡ ತಂದಿಡುತ್ತಾಳೆ. ಅಲ್ಲಿಂದ ಮುಂದೆ ಇಬ್ಬರ ಪ್ರೀತಿ ಸಸಿಯೊಡೆಯುತ್ತದೆ. ಸ್ವಲ್ಪ ಸಮಯದಲ್ಲೇ ಇವನು ಗೆಳೆಯನಲ್ಲ ಎನಿಸತೊಡಗುತ್ತದೆ. ಸಿನಿಮಾ ಡಲ್ ಆದಾಗಲೆಲ್ಲ ಅದನ್ನು ತಪ್ಪಿಸುವುದು ಅಮೂಲ್ಯ ಬೇಬಿ. ತನ್ನ ಮುದ್ದು ಪೆದ್ದು ಮಾತುಗಳಿಂದ ಅಮೂಲ್ಯ, ಗಣೇಶ್ಗೆ ಸವಾಲು ಹಾಕಿದ್ದಾರೆ. ಗಣೇಶ್ ತಮ್ಮ ಮುಂಗಾರು ಮಳೆ ಇಮೇಜಿಗೆ ಧಕ್ಕೆ ಬಾರದಂತೆ ಅಭಿನಯಿಸಿದ್ದಾರೆ. ಈ ಇಬ್ಬರ ಜೋಡಿಯಲ್ಲಿ, ಬಾತ್ರೂಮ್ ಅನ್ನು ಟೂತ್'ಬ್ರಷ್'ನಿಂದ ಕ್ಲೀನ್ ಮಾಡುವ ಹಳೆಯ ಜೋಕ್ ಇದೆ. ಅದರ ಜೊತೆಗೆ ಉಮಾಶ್ರೀ, ಎನ್.ಎಸ್.ರಾವ್ ಅಭಿನಯದ ಬಳೆ ತೊಡಿಸುವ ದೃಶ್ಯವನ್ನು ನೆನಪಿಸುವ ಅನ್'ಕ್ಲೀನ್ ಜೋಕೂ ಇದ್ದರೂ, ಸಭ್ಯ ಪ್ರೇಕ್ಷಕ ಕಿವಿ ಕ್ಲೀನ್ ಮಾಡಿಕೊಳ್ಳಬೇಕು ಎನ್ನುವ ಮಟ್ಟಕ್ಕೆ ಹೋಗುವುದಿಲ್ಲ ಎಂಬುದು ಸಮಾಧಾನ. ಗಣೇಶ್, ಅಮೂಲ್ಯಾ ಅವರ ಚೆಲುವಿನ ಚಿತ್ತಾರ, ಕಾಮಿಡಿಗೆ ಸಾಧು ಕೋಕಿಲಾರ ಅವಾಂತರ, ಮೆಚ್ಯೂರ್ಡ್ ಪ್ರೀತಿಗೆ ಅನಂತ್ನಾಗ್, ತಾರಾ. ಕೊನೆಗೆ ಪ್ರೀತಿ, ಪ್ರೇಮ ನಾಯಕಿಯ ಜೀವಕ್ಕೆ ಹಾನಿಕರ ಎಂದುಕೊಳ್ಳುವಷ್ಟರಲ್ಲಿ ಎಲ್ಲವೂ ಸುಖಕರ.

ಮೊಲದ ಬದಲು ಸೋನು ಎಂಬ ಗಿಡ ಬೆಳೆದಿದೆ. ಅಲ್ಲಲ್ಲಿ ಸೋನೆ ಮಳೆಯೂ ಇದೆ. ಸೋನು ನಿಗಂ ಹಾಡೂ ಇದೆ. ನಾಯಕಿಯ ಅಪ್ಪ ಅವಳನ್ನು ತಮ್ಮ ಮನೆಗೆ ಕರಕೊಂಡ್ ಹೋದಮೇಲೆ ನಾಯಕ ಪರ ಪರ ಅಂತ ಕೆರಕೊಂಡ್ ಅಳುತ್ತಾನೆ. ಹಾಗಾಗಿ, ಅಲ್ಪ ಸ್ವಲ್ಪ ಎರವಲು ಸ್ಟಾಕು ಮತ್ತಷ್ಟು ಸ್ವಂತಿಕೆಯ ಸರಕು ಎರಡನ್ನೂ ಸೇರಿಸುವ ನಿರ್ದೇಶಕ ಮಂಜು ಸ್ವರಾಜ್, ಮಳೆ ಬರಲಿ ಮಂಜು ಇರಲಿ ಎಂಬ ಪಾಲಿಸಿ ಪಾಲಿಸಿದ್ದಾರೆ ಎನ್ನಬಹುದು.

ಲೈಫಲ್ಲಿ ಎಡವಿದ ನಾಯಕಿ, ಕೊನೆಯಲ್ಲಿ ನಿಜವಾಗಲೂ ಎಡವಿದಾಗ ಥಟ್ಟನೆ 'ಹುಷಾರು' ಎನ್ನುತ್ತಾನೆ ನಾಯಕ. ಅದನ್ನು ಗಮನಿಸುವ ಅವಳ ಅಪ್ಪ ಒಳಗೇ ಖುಷಿಪಡುತ್ತಾನೆ. ಇಂಥ ಸೂಕ್ಷ್ಮ ದೃಶ್ಯಗಳಿಂದ ಗಮನಸೆಳೆಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಎರಡನೇ ಚಿತ್ರದ ಮೊದಲಾರ್ಧದಲ್ಲಿ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತವೆ. ಆದರೆ ನಂತರ ಮುಂಗಾರು ಮಳೆಯ ಜಾಡು ಹಿಡಿದು ಕೊನೆಗೆ ಮಾಮೂಲು ಧಾಟಿಯಲ್ಲೇ ಅಂತ್ಯ ಕಂಡು, ಈ ಹನಿ ಹನಿ ಪ್ರೇಮ್ ಕಹಾನಿ, ಹನಿ ಹನಿಗೂಡಿದ್ರೆ ಹಳ್ಳ ಎಂಬಂತಾಗುವುದು ನಿರಾಸೆ. ಶಿಶಿರದ ಯಶಸ್ ಇಲ್ಲಿ ವಿಲನ್ ಆಗಿ ಶಾಕ್ ನೀಡಿದ್ದಾರೆ. ಹರಿಕೃಷ್ಣರ ಎರಡು ಹಾಡುಗಳು ಗುನುಗುವಂತಿವೆ. ಛಾಯಾಗ್ರಹಣದಲ್ಲಿ ಮಿನುಗುವಂಥದ್ದೇನಿಲ್ಲ.

-ಹರಿ, ಕನ್ನಡಪ್ರಭ

 

 

 

Add comment