FacebookTwitter

ಛತ್ರಪತಿ ಕನ್ನಡ ಚಿತ್ರ ವಿಮರ್ಶೆ

    User Rating:  / 1
    PoorBest 

ಹಾಲಿವುಡ್ ಹೀರೋ, ಟಾಲಿವುಡ್ ಸಿನಿಮಾ!

ಚಿತ್ರ: ಛತ್ರಪತಿ
ಬಿಡುಗಡೆ: 27 ಡಿಸೆಂಬರ್ 2013

ಡಾಕ್ಟರ್ ಎಷ್ಟು ಡೀಸೆಂಟ್ ಆಗಿರುತ್ತಾರೆ ಎಂದರೆ ತೆರೆ ಮೇಲೆ ಆಕ್ಟರ್ ಆದರೂ ಅದನ್ನೇ ಮೈಂಟೇನ್ ಮಾಡಿರುತ್ತಾರೆ. ಇದಕ್ಕೆ ಅತ್ತ ನವನಾಯಕನೂ ಅಲ್ಲದ, ಇತ್ತ ಹಳೇ ನಟನೂ ಅಲ್ಲದ ಸಿದ್ಧಾಂತ ಅವರೇ ಸಾಕ್ಷಿ. ಯಾವ ಪರಿ ಅವರು ಡೀಸೆಂಟ್ ಅಂದರೆ, ನಿರ್ದೇಶಕರು ಆ್ಯಕ್ಷನ್ ಅಂದ ಮೇಲೂ ಕೈ ಕಾಲು ಅಲ್ಲಾಡಿಸದೆ ಎನ್ಎಸ್ಎಸ್ ವಿದ್ಯಾರ್ಥಿಯಂತೆ ನಿಂತಿರುತ್ತಾರೆ. ಕ್ಯಾಮೆರಾಗೆ, ಅಕ್ಕಪಕ್ಕ ನಿಂತಿರುವ ಸಹ ಕಲಾವಿದರಿಗೆ, ಚಿತ್ರ ನೋಡುವ ಪ್ರೇಕ್ಷಕನಿಗೆ ಹೀಗೆ ಪಾಪ ಯಾರಿಗೂ ಕೆಲಸ ಕೊಡಲ್ಲ ಅವರು. ಅಷ್ಟರ ಮಟ್ಟಿಗೆ ಡಾಕ್ಟರ್ ಸಿದ್ಧಾಂತ್, ತೆರೆ ಮೇಲೆ ಸೈಲೆಂಟ್ ಆಕ್ಟರ್ ಎನ್ನುವುದನ್ನು 'ಛತ್ರಪತಿ' ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಒಂದು ಭಾಷೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ರಿಮೇಕ್ ಮಾಡುವಾಗ ಒಂದಿಷ್ಟು ತಯಾರಿ ಬೇಕಾಗುತ್ತದೆ. ಅಲ್ಲಿ ಗೆದ್ದಿದೆ ಅಂದ ಮಾತ್ರಕ್ಕೆ ಅದರ ಜೆರಾಕ್ಸ್ ಪ್ರತಿ ಹಿಡಿದುಕೊಂಡು ಬಂದರೆ ಆ ಚಿತ್ರವನ್ನು ನೋಡಿ ಸಹಿಸಿಕೊಳ್ಳುವುದಾದರೂ ಹೇಗೆ? ಎನ್ನುವ ಪ್ರಶ್ನೆ 'ಛತ್ರಪತಿ' ಚಿತ್ರ ಹುಟ್ಟು ಹಾಕುತ್ತದೆ.

ಚಿತ್ರದ ಟೈಟಲ್'ಗೆ ಯಾವ ರೀತಿಯಲ್ಲೂ ನ್ಯಾಯ ಸಿಕ್ಕಿಲ್ಲ ಅಂದರೆ ಅದು ನಾಯಕನ ಸಾಫ್ಟ್ ಅಪಿಯರೆನ್ಸ್ ಹಾಗೂ ದಿನೇಶ್ ಗಾಂಧಿ ಅವರ ನಿರ್ದೇಶನದ ಜಾಣ್ಮೆ! ತೆಲುಗಿನ 'ಮಗಧೀರ' ರಾಜ್ ಮೌಳಿ ನಿರ್ದೇಶನದಲ್ಲಿ ಮೂಡಿ ಬಂದ 'ಛತ್ರಪತಿ', ನಾಯಕ ಪ್ರಭಾಸ್'ಗೆ ಬ್ರೇಕ್ ಕೊಟ್ಟ ಚಿತ್ರ. ಕೇವಲ ಮಾಸ್ ಮತ್ತು ಸಾಹಸ ಪ್ರಧಾನ ಸಿನಿಮಾ ಎನ್ನುವ ಕಾರಣಕ್ಕೆ ಮಾತ್ರ ಈ ಚಿತ್ರ ಗೆಲುವು ಕಾಣಲಿಲ್ಲ. ಎಂಥ ಹೃದಯವನ್ನೂ ಕರಗಿಸಿಬಿಡುವ ಅಮ್ಮ- ಮಗನ ಸೆಂಟಿಮೆಂಟ್ ಚಿತ್ರದ ಬಹು ದೊಡ್ಡ ಕೇಂದ್ರವಾಗಿತ್ತು. ಇದರ ನಡುವೆ ಊರು ಬಿಟ್ಟು ಬಂದವರ ಬದುಕಿನ ಸ್ಥಿತಿ, ರೌಡಿಗಳ ಅಟ್ಟಹಾಸ, ಮಾಫಿಯಾ... ಹೀಗೆ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಲಾಗಿತ್ತು. ಜೊತೆಗೆ ತೆಲುಗು ಪ್ರೇಕ್ಷಕರಿಗೆ ಬೇಕಾದ ಎಲ್ಲ ಮಸಾಲೆಗಳು ಇದ್ದವು. ಆದರೆ, ಅದೇ ಚಿತ್ರ ಕನ್ನಡಕ್ಕೆ ಬರುವಾಗ ಮೂಲದಲ್ಲಿ ಗೆಲುವಿಗೆ ಕಾರಣವಾದ ಅಂಶಗಳನ್ನು ಕೈ ಬಿಟ್ಟಿದೆ. ತೀರಾ ಸಾಧಾರಣ ಎಂಬಂತೆ ರಿಮೇಕ್ ಮಾಡಿದ್ದಾರೆ. ನಾಯಕನನ್ನು ವಿಜೃಂಭಿಸುವ ಭರದಲ್ಲೋ ಅಥವಾ 'ರಿಮೇಕ್ ಚಿತ್ರ ತಾನೇ, ಹೇಗೆ ಮಾಡಿದರೂ ನಡೆಯುತ್ತದೆ' ಎನ್ನುವ ನಿರ್ದೇಶಕನ ಮನಸ್ಥಿತಿಯಿಂದಲೋ 'ಛತ್ರಪತಿ' ಮೂಡಿ ಬಂದಂತಿದೆ.

ಶ್ರೀಲಂಕಾದಿಂದ ನಿರಾಶ್ರಿತರಾಗಿ ವಲಸೆ ಬಂದಿರುವವರಿಗೆ ನೆರವು ನೀಡುವ ಲೋಕಲ್ ಡಾನ್. ಈತನ ನೆರವಿಗೆ ಪ್ರತಿಯಾಗಿ ಅವನು ಹೇಳಿದ ಕೆಲಸ ಮಾಡಿಕೊಡುವ ಜನ. ಖಳನಟನ ಅಟ್ಟಹಾಸ ಮಿತಿಮೀರಿದಾಗ ಶಿವ ಎನ್ನುವ ಯುವಕ ಆತನ ವಿರುದ್ಧ ತಿರುಗಿ ನಿಲ್ಲುತ್ತಾನೆ. ಅಲ್ಲಿಗೆ ಶಿವ 'ಛತ್ರಪತಿ'ಯಾಗುತ್ತಾನೆ. ಇದರ ನಡುವೆ ಕಳೆದು ಹೋದ ಅಮ್ಮನ ಹುಡುಕಾಟದಲ್ಲಿರುವ ಶಿವನಿಗೆ ಅಮ್ಮ ಸಿಗುತ್ತಾಳೆ. ತಮ್ಮನೂ ಸಿಗುತ್ತಾನೆ. ಆದರೆ ತಮ್ಮನಿಗೆ ಅಣ್ಣನನ್ನು ಕಂಡರಾಗದು. ಮುಂದಿನ ಕಥೆ ಗೊತ್ತಿರುವುದೇ ಬಿಡಿ. ಚಿತ್ರದ ಹೆಸರು, ಒಂದೆರಡು ದೃಶ್ಯಗಳು, ಟೈಟಲ್ ಮ್ಯೂಸಿಕ್ ಮಾತ್ರ ರಿಮೇಕ್ ಅಲ್ಲ. ಯಥಾವತ್ತಾಗಿ ಅಷ್ಟನ್ನೂ ಕಟ್ ಆಂಡ್ ಪೇಸ್ಟ್ ಮಾಡಲಾಗಿದೆ. ಅಷ್ಟರ ಮಟ್ಟಿಗೆ ದಿನೇಶ್ ಗಾಂಧಿ ಅವರ ಕೆಲಸ ಇಲ್ಲಿ ಸುಲಭವಾಗಿದೆ. ನಾಯಕ ಸಿದ್ಧಾಂತ್ ಒಂದಿಷ್ಟು ಸಾಹಸ ಎಪಿಸೋಡುಗಳ ಹೊರತಾಗಿ ನಟನೆಯಲ್ಲಿ ಹಾವ, ಭಾವಗಳಿಲ್ಲದ, ನವರಸಗಳಿಗೆ ಅರ್ಥ ಗೊತ್ತಿರದ ಹಾಲಿವುಡ್ಹೀರೋ! ಇನ್ನು ನಾಯಕಿ ಪ್ರಿಯಾದರ್ಶಿನಿಗೆ ಹೆಚ್ಚು ಕೆಲಸವಿಲ್ಲ. ನಟಿ ಭಾನುಪ್ರಿಯಾ ಕಾಣಿಸಿಕೊಂಡಿರುವುದು ಚಿತ್ರದ ಬೋನಸ್. ಉಳಿದ ವಿಷಯಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು!

- ಆರ್.ಕೇಶವಮೂರ್ತಿ, ಕನ್ನಡಪ್ರಭ

 

 

 

Add comment