FacebookTwitter

ಅಯೋಧ್ಯಪುರಂ ಚಿತ್ರ ವಿಮರ್ಶೆ

    User Rating:  / 0
    PoorBest 

ರಾಮಾಪುರದ ರಾಮಾಯಣಗಳು!

ಚಿತ್ರ: ಅಯೋಧ್ಯಪುರಂ
ಬಿಡುಗಡೆ: 03 ಜನವರಿ 2014

ಮ್ಯಾಜಿಕ್, ಗಿಮಿಕ್ ಹಾಗೂ ವಿವಾದಗಳಿಂದಲೇ ತಮ್ಮ ಸಿನಿಮಾಗಳನ್ನು ಗೆಲ್ಲಿಸಬೇಕೆಂದು ಕೆಲ ನಿರ್ದೇಶಕರು ಪಣ ತೊಟ್ಟಂತೆ ಕಾಣುತ್ತಿದೆ. ಹೀಗಾಗಿ ತಮ್ಮ ಚಿತ್ರಗಳಿಗೆ ತಾವೇ ಒಂದಿಷ್ಟು 'ಹುಳಿ' ಹಿಂಡಿಕೊಂಡು ವಿವಾದ ಮಾಡಿಕೊಳ್ಳುತ್ತ ಅದೇ ದೊಡ್ಡ ಸಕ್ಸಸ್ ಅಂತ ನಗುತ್ತಿದ್ದಾರೆ. ಇಂಥವರ ಚಿತ್ರಗಳಿಗೆ ಸೇರುವ ಮತ್ತೊಂದು ಸಿನಿಮಾ 'ಕರ್ನಾಟಕ ಅಯೋಧ್ಯಪುರಂ'. ಚಿತ್ರದ ಶೀರ್ಷಿಕೆಯಲ್ಲಿ ಇರುವ 'ಅಯೋಧ್ಯಪುರಂ' ಎನ್ನುವ ಹೆಸರಿನಿಂದಲೇ ಗಲಭೆ ಮಾಡಿಕೊಂಡ ಚಿತ್ರವಿದು. ಇದರ ಹೆಸರು ನೋಡಿ, ನಿರ್ದೇಶಕ ಲವ ಒಂದು ಗಂಭೀರವಾದ ಕಥೆ ಕಟ್ಟಿಕೊಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಆರಂಭದಲ್ಲೇ ಬರುವ ಫ್ಲ್ಯಾಷ್ ಬ್ಯಾಕ್ ದೃಶ್ಯಗಳು ಮುಗಿದ ಕೂಡಲೇ ಲವ, ಪ್ರೇಕ್ಷಕನ ನಿರೀಕ್ಷೆಯನ್ನು ಹುಸಿ ಮಾಡುತ್ತಾರೆ.

ಚಿತ್ರ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿವಾದ ಮಾಡಿಕೊಂಡ ಈ ಚಿತ್ರವನ್ನು ನೋಡಿದವರಿಗೆ ಅಲ್ಲೂ ಒಂದು ಗಿಮಿಕ್ ಕಾಣಿಸುತ್ತದೆ. ಸ್ವಾಮೀಜಿ ಪಾತ್ರ ಒಕ್ಕಲಿಗರ ಮಠದ ಸ್ವಾಮಿಗಳನ್ನು, ಕುತಂತ್ರಿ ರಾಮಭಕ್ತನ ಪಾತ್ರಧಾರಿ ಬಾಳಾ ಠಾಕ್ರೆಯನ್ನು, ಹಿಂದೂ ರಕ್ಷಕನ ಪಾತ್ರ ಪ್ರಮೋದ್ ಮುತಾಲಿಕ್‌'ರನ್ನು ಹೋಲುವಂತೆ ನೋಡಿಕೊಂಡಿದ್ದಾರೆ. ಈ ಪಾತ್ರಗಳ ಹಾವಭಾವಗಳನ್ನು ಕೂಡ ಪಕ್ಕಾ ಪ್ಲಾನ್ ಮಾಡಿ ಕಂಪೋಸ್ ಮಾಡಿದ್ದಾರೆ ಲವ. ಇಂಥ ಗಿಮಿಕ್‌'ಗಳಿಗೆ ತಲೆ ಕೆಡಿಸಿಕೊಳ್ಳುವ ಬದಲು ಇರುವ ಕಥೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರೆ ಚಿತ್ರವನ್ನು ಮೆಚ್ಚಿಕೊಳ್ಳಲು ಸಾಕಷ್ಟು ಕಾರಣಗಳು ಸಿಗುತ್ತಿದ್ದವೇನೋ. ಆದರೆ, ಇದರಿಂದಲೂ ವಂಚಿತನಾಗಿರುವ ಲವ, ಅಲ್ಲಲ್ಲಿಯಾದರೂ ಲವಲವಿಕೆ ಮೆರೆಯುತ್ತಾರೆ ಎಂದರೆ ಎಮೋಷನಲ್ ದೃಶ್ಯದಲ್ಲೇ ಹುಡುಗಿಯ ಸೀರೆ ಜಾರಿಸಿ ರವಿಕೆಗೆ ಫೋಕಸ್ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಲವ'ರವಿಕೆ' ಅಭಿರುಚಿಯನ್ನು ಇಲ್ಲಿ ಕಾಣಬಹುದು!

ಕಾಲ್ಗೆಜ್ಜೆ ದಾನ ಮಾಡಿದವಳಿಗೆ ಕಾಳು ಹಾಕಲು ನಿರ್ಧರಿಸುವ ನಾಯಕ ಪಕ್ಕಿಗೆ ಪಕ್ಕದಲ್ಲೇ ಇರುವ ಗೆಳೆಯರು ಕೂಡ ದುಷ್ಮನ್‌'ಗಳಾಗುತ್ತಾರೆ. ಇನ್ನು ನಾಯಕಿ ತಾನು ಮುಸ್ಲಿಂ ಹುಡುಗಿಯೆಂದು ಆಗಾಗ ಜ್ಞಾಪಿಸಿಕೊಳ್ಳಲು ಹೋಗುತ್ತಾಳೋ ಅಥವಾ ನನ್ನ ಚಿತ್ರದ ನಾಯಕಿ ಮುಸ್ಲಿಂ ಕೋಮಿನವಳೆಂದು ತೋರಿಸಬೇಕೆಂಬ ನಿರ್ದೇಶಕನ ಅವಿರತ ಪ್ರಯತ್ನವೊ ಗೊತ್ತಿಲ್ಲ, ಒಟ್ಟಿನಲ್ಲಿ ನಾಯಕಿ ಮುಮತಾಜ್ ಬೇಗಂ ಒಮ್ಮೊಮ್ಮೆ ಮಲ್ಲೇಶ್ವರ ಗಲ್ಲಿ ಹುಡುಗಿಯಾಗಿ ಕಂಡರೆ, ಇದ್ದಕ್ಕಿದ್ದ ಹಾಗೆ 'ನಿಮ್ದುಕೆ, ನಮ್ದುಕೆ, ಕ್ಯಾಗೆ, ಗಿಗೆ' ಎನ್ನುತ್ತ ಶಿವಾಜಿನಗರದ ಬೇಬಿಯಾಗುತ್ತಾಳೆ. ಜೊತೆಗೆ ಆಗಾಗ ಬುರ್ಕಾ ತೊಟ್ಟು ಹುಡುಗನ ಹಿಂದೆ ಬರುತ್ತಾಳೆ. ಸಿನಿಮಾ ತಾಂತ್ರಿಕವಾಗಿ ರಿಚ್ ಆಗಿದೆ ಎಂದು ಹೇಳಲು ಸಿಕ್ಕ ಸಿಕ್ಕ ಕಲರ್‌'ಗಳನ್ನು ಚಿತ್ರಕ್ಕೆ ಬಳಿದಿದ್ದಾರೆ.

ಇಷ್ಟಕ್ಕೂ ಕಥೆಯಲ್ಲಿ ಏನಿದೆ? ಮುಸ್ಲಿಂ ಹುಡುಗಿ ಮತ್ತು ಹಿಂದು ಹುಡುಗನ ಪ್ರೀತಿ, ಇದರ ನಡುವೆ ಎರಡು ಕೋಮಿನವರ 'ಒಳ' ಒಪ್ಪಂದದ ರಾಜಕೀಯ. ಕೋಮು ಸೌಹಾರ್ದಕ್ಕೆ ಹೆಸರಾದ ರಾಮಾಪುರ ಜನಾಂಗೀಯ ಗಲಭೆಯಿಂದ 'ಕೋಮ' ಸ್ಥಿತಿ ತಲುಪುವುದು, ಪ್ರೇಮಿಗಳ ಸಾವು... ಹೀಗೆ ಒಂದಕ್ಕೊಂದು ಸಂಬಂಧ ಇಲ್ಲದ ದೃಶ್ಯಗಳು, ಸನ್ನಿವೇಶಗಳ ಮೂಲಕ ರಾಮಾಪುರದ ರಾಮಾಯಣಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಆದರೆ, ರಾಮಾಪುರ ಊರಿನಲ್ಲಿ ನಡೆಯುವ ಕಥೆಗೆ 'ಅಯೋಧ್ಯಪುರಂ' ಅಂತ ಹೆಸರಿಟ್ಟಿದ್ದು ಯಾಕೆ? ಕಲಾವಿದರ ವಿಚಾರಕ್ಕೆ ಬಂದರೆ, ನಾಯಕ ರಾಕೇಶ್ ಅಭಿನಯದ ಬಾಲ್ಯವನ್ನು ಮೀರಿದ್ದಾರೆ.

ನಾಯಕಿ ನಯನಾಳ ನಟನೆ, ಚಿತ್ರದ ಕೊನೆವರೆಗೂ ಬ್ಯೂಟಿ ಪಾರ್ಲರ್'ನಿಂದ ಎದ್ದುಬಂದಂತೆ ಇದೆ. ಅಪ್ಪನಾಗಿ ಅಚ್ಯುತ್ ಕುಮಾರ್‌'ಗೆ ಹೆಚ್ಚು ಕೆಲಸವಿಲ್ಲದಿದ್ದರೂ ಮೆಚ್ಚುಗೆಯಾಗುತ್ತಾರೆ. ಅಲ್ಲಲ್ಲಿ ಸಂಭಾಷಣೆಗಳು ಕಿಕ್ ಕೊಡುತ್ತವೆ. ಆರಂಭದ ಸಾಲನ್ನೇ ಮುಂದುವರೆಸಿ, ಅದೇ ಧಾಟಿಯಲ್ಲಿ ಚಿತ್ರ ಬಂದಿದ್ದರೆ ಲವ್‌'ಗೆ ಬಹುಪರಾಕ್ ಹಾಕಬಹುದಿತ್ತು.

- ಆರ್. ಕೇಶವಮೂರ್ತಿ, ಕನ್ನಡಪ್ರಭ

 

 

 

Add comment