FacebookTwitter

ಘರ್ಷಣೆ ಚಿತ್ರ ವಿಮರ್ಶೆ

    User Rating:  / 2
    PoorBest 

ಇದು ಫಿಕ್ಷನ್ ಅಲ್ಲ, ಫ್ರಿಕ್ಷನ್ ಸಿನಿಮಾ

ಚಿತ್ರ: ಘರ್ಷಣೆ
ಬಿಡುಗಡೆ: 03 ಜನವರಿ 2014

ಇದು ರೆಗ್ಯುಲರ್ ಮಾಲಾಶ್ರೀ ಸಿನಿಮಾ ಅಲ್ಲ ಎಂಬ ನಿರೀಕ್ಷಣಾ ಜಾಮೀನಿನ ಅಗತ್ಯ ಇರೋ ಚಿತ್ರ ಘರ್ಷಣೆ. ಇಲ್ಲಿ ಮಾಲಾಶ್ರೀ ಅವರ ಶಕ್ತಿ ಪ್ರದರ್ಶನ ಇಲ್ಲ. ಇದೇನಿದ್ದರೂ ಅವರ ಯುಕ್ತಿ ಪ್ರದರ್ಶನ. ಹಾಗಾಗಿ, ಮಾಲಾಶ್ರೀ ಅವರ ಮೇಲಿನ ಭಕ್ತಿಯಿಂದ ಅಭಿಮಾನಿಗಳು ಘರ್ಷಣೆ ನೋಡಲು ಹೋದರೆ ನಿರೀಕ್ಷೆಗೆ ಮೋಸ ಆಗಬಹುದು. ರಾಮು ಇಲ್ಲದ ಮಾಲಾಶ್ರೀ ಹೇಗಿರುತ್ತಾರೆ ಎಂಬುದಕ್ಕೆ ಉದಾಹರಣೆ ಘರ್ಷಣೆ. ಏಕೆಂದರೆ ಇಲ್ಲಿ ತಮ್ಮ ಬ್ರ್ಯಾಂಡ್ ಚಿತ್ರಗಳಂತೆ ಮಾಲಾಶ್ರೀ ಅವರು ಎತ್ತಿನ ಗಾಡಿಯನ್ನು ಎತ್ತಿ ವಿಲನ್‌ಗಳಿಗೆ ಹೊಡೆಯುವುದಿಲ್ಲ, ಮಾತಿನಲ್ಲೇ ಬೆಂಡೆತ್ತುವ ವಿಷಯಗಳಿಗೂ ಅವರು ಇಲ್ಲಿ ಬ್ರೇಕ್ ಹಾಕಿದ್ದಾರೆ. ಹಾಗಾಗಿ ಘರ್ಷಣೆ, ಅತಿಮಾನುಷ ಶಕ್ತಿ ತೋರಿಸುವ ಮಾಲಾಶ್ರೀ ಅವರ ಫಿಕ್ಷನ್ ಸಿನಿಮಾ ಅಲ್ಲ, ಇದು ಕೇವಲ ಫ್ರಿಕ್ಷನ್ ಸಿನಿಮಾ ಎನ್ನಬಹುದು.

ಅಂದಹಾಗೆ, ಚೇರನ್ ಅಭಿನಯದ ಯುದ್ಧಂ ಸೇಯ್ ತಮಿಳು ಚಿತ್ರದ ಯಥಾವತ್ ಕಥೆ ಘರ್ಷಣೆಯದ್ದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ತನ್ನ ತಂಗಿ ನಾಪತ್ತೆಯಾದಾಗಲೇ ಪೊಲೀಸ್ ಆಫೀಸರ್ ನೇತ್ರಾಗೆ ಇನ್ನೊಂದು ಕೇಸ್ ಸಿಗುತ್ತದೆ. ಆದರೆ ಎರಡೂ ಕೂಡ ಒಂದೇ ಕೇಸಿನ ಎರಡು ಮುಖಗಳು ಎಂದು ಗೊತ್ತಾಗುವ ಮೂಲಕ ಘರ್ಷಣೆ ಶುರುವಾಗುತ್ತದೆ.

ಚಿತ್ರಕಥೆಯ ವಿಶೇಷ ಎಂದರೆ ಆರಂಭದಿಂದ ಆಲ್‌'ಮೋಸ್ಟ್ ಕೊನೆಯವರೆಗೂ ಕಥೆಯ ಲಿಂಕ್ ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್‌'ಫರ್ ಆಗುತ್ತಲೇ ಇರುತ್ತದೆ. ಸ್ಪೆಷಲ್ ಬ್ರ್ಯಾಂಚ್‌'ಗೆ ಟ್ರಾನ್ಸ್‌ಫರ್ ಮಾಡಿಸಿಕೊಂಡು ಬಂದ ಆಫೀಸರ್ ನೇತ್ರಾ ಈ ಲಿಂಕ್‌'ಗಳ ಜಾಡು ಹಿಡಿದು ಹೊರಡುತ್ತಾಳೆ. ಕ್ಷಣಕ್ಕೊಮ್ಮೆ ಶಿಫ್ಟ್ ಆಗುವ ಲಿಂಕ್‌'ಗಳನ್ನು ನೋಡಿದಾಗ ಕೊಕ್ಕೊ ಆಟ ಜ್ಞಾಪಕಕ್ಕೆ ಬಂದರೂ ಆಗಾಗ ಪೊಲೀಸ್ ಮತ್ತು ಕ್ರಿಮಿನಲ್‌'ಗಳ ಕಣ್ಣಾಮುಚ್ಚಾಲೆಯೂ ಇಲ್ಲಿದೆ. ಮನುಷ್ಯರ ಕೈಗಳನ್ನು ಕತ್ತರಿಸಿ ಬಾಕ್ಸ್‌ಗಳಲ್ಲಿ ತುಂಬಿ ಅದನ್ನು ಸಾರ್ವಜನಿಕ ಸ್ಥಳದಲ್ಲಿಡುವ ಕ್ರಿಮಿನಲ್‌ಗಳು ಆಗಾಗ ಪೊಲೀಸರಿಗೆ ಹ್ಯಾಂಡ್ ಸಿಗ್ನಲ್ ಕೊಡುತ್ತಾರೆ. ಬರ್ತಾ ಬರ್ತಾ ಈ ಬಾಕ್ಸ್ ಆಫೀಸ್ ವಿಷಯ ತಲೆ ಕತ್ತರಿಸಿ ತಂದಿಡುವ ಮೂಲಕ ಹೆಡ್ ಆಫೀಸ್‌ಗೂ ಶಿಫ್ಟ್ ಆಗುತ್ತದೆ. ಕ್ಲೈಮ್ಯಾಕ್ಸ್‌ನ ಅಂಚಿನಲ್ಲಿ ಈ ಎಲ್ಲ ಕೈ, ತಲೆ ಕತ್ತರಿಸುವ 'ಬೆಳವಣಿಗೆಗಳ' ಹಿಂದಿನ ಸತ್ಯ ಗೊತ್ತಾಗುತ್ತದೆ. ತಲೆ, ಕೈ ಕತ್ತರಿಸುವುದರ ಹಿಂದೆ ಶೋಷಿತ ಕುಟುಂಬವೊಂದರ ಕೈವಾಡ ಇದೆ ಎಂಬುದು ತಿಳಿದಾಗ ಇದು ಪ್ರೇಕ್ಷಕರಿಗೆ ಕುಟುಂಬ ಸಮೇತ ನೋಡುವ ಚಿತ್ರ ಎನಿಸಬಹುದು. ಘರ್ಷಣೆಯ ಚಿತ್ರಕಥೆಯಲ್ಲಿ ವಿಶೇಷತೆಯಿದೆ. ಆಕ್ಷನ್ ಚಿತ್ರ ಎಂದರೆ ಅದು ಮಾಸ್‌'ಗೆ ಮಾತ್ರ ಎಂಬ ನಂಬಿಕೆ ಸುಳ್ಳು ಮಾಡುವ ಕ್ಲಾಸ್ ಟಚ್ ಇದೆ. ಆದರೆ, ಬಹುಶಃ, ಅಂಥಾ ಇಮೇಜ್ ಇರುವ ಮಾಲಾಶ್ರೀ ಅವರನ್ನು ನಾಯಕಿಯಾಗಿಸಿದ್ದೇ ಈ ಚಿತ್ರದ ದೌರ್ಬಲ್ಯ ಎನಿಸಿದರೂ ತಪ್ಪಿಲ್ಲ. ಮಾಲಾಶ್ರೀ ಅವರ ತೀರಾ ಮಾಮೂಲಿ ಎಂಟ್ರಿ ಆದಾಗಲೇ ಪ್ರೇಕ್ಷಕ ಇದು ವಿಭಿನ್ನ ಸಿನಿಮಾ ಎಂದು ಅರ್ಥ ಮಾಡಿಕೊಂಡರೆ ನಿರ್ದೇಶಕ ದಯಾಳ್ ಬಚಾವ್ ಆಗಬಹುದು. ಆದರೆ ಕೊರತೆ ಇರುವುದು ಚಿತ್ರದ ನೋಡಿಸಿಕೊಂಡು ಹೋಗುವ ಗುಣದಲ್ಲಿ. ಇಂಟರ್‌'ವಲ್ ಮುಗಿದರೂ ಮುಗಿಯದ ಪಾತ್ರ ಪರಿಚಯ ಕೊಂಚ ಬೇಸರ ಹುಟ್ಟಿಸಬಹುದು. ಅಕ್ಕನ ಖದರ್ ಇರುವ ಡಿಪಾರ್ಟ್‌'ಮೆಂಟು, ಅಕ್ಕ ತಂಗಿ ಸೆಂಟಿಮೆಂಟು, ಅದರ ನಡುವೆ ಎರಡು ಕೇಸುಗಳ ನಡುವೆ ಇರಬಹುದಾದ ನಂಟು, ಇವಿಷ್ಟೇ ವಿಷಯಗಳಿದ್ದು, ಅವು ಮುಂದೇನಾಗುತ್ತದೆ ಎಂಬ ಕುತೂಹಲ ಹುಟ್ಟಿಸಿದರೂ ಆ ಕ್ಷಣಕ್ಕೆ ಡಲ್ ಎನಿಸಬಹುದು.

ಆಕ್ಷನ್ ಡಲ್ ಆದರೂ ರಿಯಾಕ್ಷನ್‌'ಗಳಲ್ಲಿ ಮಾಲಾಶ್ರೀ ಇಷ್ಟವಾಗುತ್ತಾರೆ. ಆಶಿಶ್ ವಿದ್ಯಾರ್ಥಿ ಹೊಸರೀತಿಯ ಪಾತ್ರದಲ್ಲಿ ಗೆದ್ದಿದ್ದಾರೆ. ರೂಪಿಕಾ, ಅಯ್ಯಪ್ಪ ಶರ್ಮ, ಮುನಿ, ನಯನಾ, ಸುಚೇಂದ್ರಪ್ರಸಾದ್, ಪವಿತ್ರಾ ಲೋಕೇಶ್, ಅಜಯ್ ರಾಜ್ ಘರ್ಷಣೆಯ ಇನ್ನಿತರ ಆಕರ್ಷಣೆಗಳು.

ಶಾಮ್ ಪ್ರಸಾದ್ ಸಂಭಾಷಣೆ ಚಿತ್ರದ ಕಥೆಯಲ್ಲಿನ ಘನತೆಯನ್ನು ಉಳಿಸಿಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ, ಅಭಿಷೇಕ್ ಹಿನ್ನೆಲೆ ಸಂಗೀತ ಕೂಡ. ಆದರೆ, ಒಳಗೆ ಸೇರಿದರೆ ಗುಂಡು ಹಾಡು ಮಾತ್ರ ಇದಕ್ಕೆ ಅಪವಾದ. ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಘರ್ಷಣೆಯ ಸ್ಮೂತ್ ರನ್ನಿಂಗ್‌'ಗೆ ಕಾರಣವಾಗಿದೆ.

- ಹರಿ, ಕನ್ನಡಪ್ರಭ

 

 

 

Add comment