ನಿನ್ನಿಂದಲೇ ಕನ್ನಡ ಚಿತ್ರ ವಿಮರ್ಶೆ

ಪುನೀತ್ ಅಭಿಮಾನಿಗಳಿಗೆ ಹೊಸ ಸುಗ್ಗಿ

ಚಿತ್ರ: ನಿನ್ನಿಂದಲೇ
ಬಿಡುಗಡೆ: 16 ಜನವರಿ 2014

ಈ ವರ್ಷದ ಬಹುನಿರೀಕ್ಷಿತ ಚಿತ್ರವು ಪುನೀತ್ ರಾಜಕುಮಾರ್ ಅಭಿಮಾನಿಗಳ ನಿರೀಕ್ಷೆಗಳನ್ನ ಹುಸಿ ಮಾಡುವುದಿಲ್ಲ. ಕನ್ನಡದ ಮಟ್ಟಿಗೆ ಹೊಸತನ ಸಾಕಷ್ಟು ಕಡೆ ಹಾಸುಹೊಕ್ಕಾಗಿದೆ. ರೋಮ್ಯಾನ್ಸ್ ಮತ್ತು ಸಾಹಸಗಳು ಒಳ್ಳೆಯ ಹದದಲ್ಲಿ ಬೆರತಿರುವ ನಿನ್ನಿಂದಲೇ ಚಿತ್ರ ಸೂಪರ್ ಹಿಟ್ ಆಗುವ ಎಲ್ಲಾ ಫಾರ್ಮುಲಾಗಳನ್ನ ಹೊಂದಿದೆ... ಪರಮಾತ್ಮ ಬಳಿಕ ಪುನೀತ್ ನಟಿಸಿರುವ ಮೊದಲ ರೋಮ್ಯಾಂಟಿಕ್ ಸಿನಿಮಾ ಇದಾಗಿದ್ದರೂ ಸಾಹಸಪ್ರಿಯರಿಗೂ ಮೋಸವಾಗದಂತೆ ಕತೆಯನ್ನ ಹೆಣೆಯಲಾಗಿದೆ.

ಚಿತ್ರದ ಕಥೆ...
ನಿನ್ನಿಂದಲೇ ಚಿತ್ರ ಎನ್ನಾರೈಗಳ(NRI) ಕಥೆ ಹೊಂದಿದೆ. ಅಮೆರಿಕದಲ್ಲಿ ನಾಲ್ವರು ಸ್ನೇಹಿತರ ಒಡನಾಟ ಹಾಗೂ ಮತ್ತೊಬ್ಬ ಹುಡುಗಿಯ ಲವ್ ಸೆಂಟಿಮೆಂಟ್'ಗಳು ಈ ಚಿತ್ರದಲ್ಲಿವೆ. ವೆಂಕಟೇಶ್ ಅಕಾ ವಿಕಿ (ಪುನೀತ್ ರಾಜಕುಮಾರ್), ಪಪ್ಪು (ಅಲೋಕ್ ಬಾಬು), ನಂದು (ಸೋನಿಯಾ ದೀಪ್ತಿ) ಮತ್ತು ಬಸಿ(ವಿನಾಯಕ್ ಜೋಶಿ) ನಾಲ್ವರು ಆಪ್ತಮಿತ್ರರು. ಈ ಗೆಳೆಯರ ಗುಂಪಿಗೆ ಪ್ರಮೀಳಾ (ಎರಿಕಾ ಫರ್ನಾಂಡಿಸ್) ಎಂಬ ಹೊಸ ಹುಡುಗಿಯ ಎಂಟ್ರಿಯಾಗುತ್ತದೆ. ಆದರೆ, ಪ್ರಮೀಳಾಗೆ ವಿಕ್ಕಿಯ ಮೇಲೆ ಲವ್ ಆಗುತ್ತದೆ. ಆದರೆ, ವಿಕ್ಕಿಯ ಧೋರಣೆಯೇ ಬೇರೆ. ಪ್ರಮೀಳಾ ತನ್ನ ಪ್ರೇಮದಲ್ಲಿ ಯಶಸ್ವಿಯಾಗುತ್ತಾಳಾ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್ ಕಥೆ...

ನಿನ್ನಿಂದಲೇ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಕನ್ನಡ ಮಟ್ಟಿಗೆ ಈ ಚಿತ್ರದ ತಂತ್ರಜ್ಞಾನ ಸ್ವಲ್ಪಮಟ್ಟಿಗೆ ಹೊಸತನದಿಂದ ಕೂಡಿದೆ. ಸ್ಕೈಡೈವಿಂಗ್, ಮೊದಲಾದ ಸಾಹಸಗಳು ಮೈನವಿರೇಳಿಸುವಂತಿವೆ. ಅದಕ್ಕೆ ತಕ್ಕಂತೆ ಸಿನಿಮಾಟೋಗ್ರಫಿ ಕೂಡ ಅತ್ಯುತ್ತಮ ಮಟ್ಟದಲ್ಲಿದೆ....

ಪುನೀತ್ ಬ್ಯಾಂಗ್ ಬ್ಯಾಂಗ್...
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪವರು ಮತ್ತು ಖದರು ಇಡೀ ಚಿತ್ರವನ್ನ ಆವರಿಸಿಕೊಂಡಿದೆ. ರೋಮಾನ್ಸ್ ಮತ್ತು ಸ್ಟಂಟ್ಸ್ ಎರಡರಲ್ಲೂ ಅಪ್ಪು ಸೈ ಎನಿಸಿಕೊಳ್ಳುತ್ತಾರೆ. ಅಭಿಮಾನಿಗಳಿಗೆ ವಾವ್ ಎನ್ನುವಷ್ಟು ತೃಪ್ತಿ ಸಿಗುತ್ತದೆ. ಅಪ್ಪುವಿನ ಎನರ್ಜಿ ಮಟ್ಟ ಹಾಗೂ ಪಾತ್ರದೊಳಗೆ ಇನ್ವಾಲ್ವ್ ಆಗುವ ರೀತಿ ನಿಜಕ್ಕೂ ಬೆರಗು ಹುಟ್ಟಿಸುತ್ತದೆ....

ಭರವಸೆ ಮೂಡಿಸುವ ನಾಯಕಿ
ಎರಿಕಾ ಫರ್ನಾಂಡಿಸ್ ಎಂಬ ಹೊಸ ನಾಯಕಿ ಈ ಚಿತ್ರದಿಂದ ಸ್ಯಾಂಡಲ್'ವುಡ್'ಗೆ ಅಡಿ ಇಟ್ಟಿದ್ದಾಳೆ. ಮುಂದೆ ಸಾಕಷ್ಟು ವರ್ಷ ಇಲ್ಲಿಯ ರಾಣಿಯಾಗಿ ಮೆರೆಯಬಲ್ಲಳೆಂಬ ಭರವಸೆ ಮೂಡಿಸಿದ್ದಾಳೆ. ಪುನೀತ್ ರಾಜ್'ಕುಮಾರ್ ಮತ್ತು ಎರಿಕಾ ಜೋಡಿ ಈ ಚಿತ್ರದ ಪ್ರಮುಖ ಹೈಲೈಟ್'ಗಳಲ್ಲಿ ಒಂದು.

ವಿನಾಯಕ ಜೋಶಿ, ಸೋನಿಯಾ ದೀಪ್ತಿ ಸೇರಿದಂತೆ ಚಿತ್ರದ ಇತರ ಪಾತ್ರವರ್ಗಗಳು ಅಪ್ಯಾಯಮಾನವಾಗುತ್ತವೆ...

ಕಾಮಿಡಿ ನಿರಾಸೆ
ಚಿತ್ರದ ಕೆಲವೇ ಮೈನಸ್ ಪಾಯಿಂಟುಗಳಲ್ಲಿ ಕಾಮಿಡಿಯೂ ಒಂದೆನ್ನಬಹುದು. ತೆಲುಗಿನ ಖ್ಯಾತ ಕಾಮಿಡಿಯನ್ ಬ್ರಹ್ಮಾನಂದ್ ಅವರ ಹಾಸ್ಯವಿದೆ ಎಂದು ಸಾಕಷ್ಟು ಪ್ರಚಾರ ಮಾಡಿಕೊಂಡಿದ್ದ ಈ ಚಿತ್ರದಲ್ಲಿ ಈ ಅಂಶವೇ ಕೈಕೊಟ್ಟಿದೆ. ಬ್ರಹ್ಮಾನಂದ್ ಕನ್ನಡಿಗರನ್ನ ನಗಿಸಲು ವಿಫಲರಾಗುತ್ತಾರೆ. ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಇಲ್ಲದಿದ್ದಾಗ ಬ್ರಹ್ಮ ತಾನೇ ಏನು ಮಾಡಲು ಸಾಧ್ಯ ಹೇಳಿ? ಹಾಗೆಯೇ, ಸಾಧು ಕೋಕಿಲಾ ಉಪಸ್ಥಿತಿ ಕೂಡ ಚಿತ್ರದ ಹಾಸ್ಯಕ್ಕೆ ರುಚಿ ನೀಡಲು ವಿಫಲವಾಗುತ್ತದೆ.

ಇನ್ನು, ಚಿತ್ರದ ಸಂಗೀತ ಅಲ್ಲಲ್ಲಿ ಪ್ರೇಕ್ಷಕರ ಮನಸನ್ನ ಆವರಿಸಿಕೊಳ್ಳಲು ಸಫಲವಾಗಿದೆ. ಮಣಿ ಶರ್ಮಾ ಸಂಗೀತ ನಿರ್ದೇಶನದ ಒಂದೆರಡು ಹಾಡುಗಳು ಮನಸಲ್ಲುಳಿಯುತ್ತವೆ...

ತೆಲುಗಿನ ಹಿರಿಯ ನಿರ್ದೇಶಕ ಜಯಂತ್ ಪರಾಂಜಿ ಕನ್ನಡಕ್ಕೆ ಹೊಸತನದ ಚಿತ್ರ ನೀಡಿದ್ದಾರೆ. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಮಹೇಶ್ ಬಾಬು ಮೊದಲಾದ ದೊಡ್ಡ ತಾರೆಗಳನ್ನ ನಿರ್ದೇಶಿಸಿ ಅನುಭವ ಹೊಂದಿದ ಜಯಂತ್ ಪರಂಜಿ ಕನ್ನಡದ ಪವರ್ ಸ್ಟಾರ್ ಅನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ.

ಒಟ್ಟಾರೆ, ತಾಂತ್ರಿಕವಾಗಿ ಮೇಲ್ಮಟ್ಟದಲ್ಲಿರುವ "ನಿನ್ನಿಂದಲೇ" ಪುನೀತ್ ಅಭಿಮಾನಿಗಳಿಗಷ್ಟೇ ಅಲ್ಲ, ಕನ್ನಡ ಚಿತ್ರ ಪ್ರೇಮಿಗಳು ಒಮ್ಮೆಯಾದರೂ ಹೆಮ್ಮೆಯಿಂದ ನೋಡಬಹುದಾದ ಕನ್ನಡ ಚಿತ್ರವಾಗಿದೆ.