FacebookTwitter

ಕೇಜ್ರಿವಾಲ್ ಒತ್ತಡಕ್ಕೆಲ್ಲಾ ಕೇಂದ್ರ ಮಣಿಯಲ್ಲ; ಶಿಂದೆ

    User Rating:  / 0
    PoorBest 
ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

ನವದೆಹಲಿ: ಕಾನೂನಿಗೆ ವಿರುದ್ಧವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತವರ ಕಾನೂನು ಸಚಿವರು ನೀಡಿದ್ದ ಸೂಚನೆಗೆ ಸೊಪ್ಪು ಹಾಕದಿದ್ದ ದೆಹಲಿ ಪೊಲೀಸರನ್ನು ಕೇಂದ್ರ ಸರ್ಕಾರ ಕೂಡಲೇ ಅಮಾನತು ಮಾಡಬೇಕು ಹಾಗೂ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್ ವ್ಯವಸ್ಥೆಯನ್ನು ಕೇಂದ್ರ ಗೃಹಸಚಿವಾಲಯದಿಂದ ಪ್ರತ್ಯೇಕಿಸಿ ಆ ಪ್ರಾಧಿಕಾರವನ್ನು ಮುಖ್ಯಮಂತ್ರಿಯ ಅಧಿಕಾರದ ಅದೀನಕ್ಕೊಳಪಡಿಸಬೇಕು ಎಂದು ಪಟ್ಟುಹಿಡಿದು ಆಮ್ ಆದ್ಮಿ ಪಕ್ಷದ ಬೆಂಬಲಿಗರು, ಮುಖಂಡರು ಮತ್ತು ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಸೋಮವಾರದಿಂದ ಹಗಲು ರಾತ್ರಿ ನಡೆಸುತ್ತಿರುವ ಧರಣಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿರುವ ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂದೆ, ಕೇಜ್ರಿವಾಲ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಂದ ಬಳಿಕವಷ್ಟೇ ಅದನ್ನ ಆಧರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬಹುದಷ್ಟೇ ಹೊರತು ಸುಮ್ಮನೆ ಧರಣಿ ಕುಳಿತ ಮಾತ್ರಕ್ಕೆ ಏಕಾಏಕಿ ತಲೆಬಾಲ ಇಲ್ಲದಂತೆ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಸಚಿವರ ಆದೇಶ ಪಾಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿ ಬಂದ ಬಳಿಕ ಅದರ ಸತ್ಯಾಸತ್ಯೆತೆಯನ್ನು ಆದರಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತಾದ ಕೇಂದ್ರದ ನಿಲುವಿನಲ್ಲಿ ಯಾವೊಂದು ಬದಲಾವಣೆಯೂ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಕೇಜ್ರಿವಾಲ್ ಮತ್ತವರ ಬೆಂಬಲಿಗರ ಪಡೆ ದೆಹಲಿಯ ರೈಲ್ ಭವನದ ಸಮೀಪ ನಡೆಸುತ್ತಿರುವ ಭರ್ಜರಿ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಸಚಿವರುಗಳ ಸೂಚನೆಗೆ ಪೊಲೀಸರು ಸ್ಪಂದಿಸಲಿಲ್ಲ ಎನ್ನಲಾಗಿದ್ದು, ಸದರಿ ಆಮ್ ಆದ್ಮಿ ನಾಯಕರು ನೀಡಿದ್ದ ಸೂಚನೆಗಳೆಲ್ಲವೂ ಕಾನೂನಿಗೆ ವಿರುದ್ಧವಾಗಿದ್ದರಿಂದ ಕಾನೂನಿಗೆ ತಲೆ ಬಾಗಿದ ಪೊಲೀಸರು, ಕಾನೂನಿಗೆ ಮಿಗಿಲಾದ ಸೂಚನೆಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿ ಕರ್ತವ್ಯಲೋಪ ಎಸಗಲು ನಿರಾಕರಿಸಿದ್ದಾರೆ.

ಉಗಾಂಡ ಮತ್ತು ನೈಜೀರಿಯಾ ಮೂಲದ ನಾಲ್ವರು ಮಹಿಳೆಯರು ದೆಹಲಿಯ ಬಡಾವಣೆಯೊಂದರಲ್ಲಿ ಮನೆ ಮಾಡಿಕೊಂಡಿದ್ದು ಅಲ್ಲವರು ವೇಶ್ಯಾವಾಟಿಕೆ ಮತ್ತು ಅಮಲು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪೊಲೀಸ್ ಅಧಿಕಾರಿಯೊಂದಿಗೆ ಸ್ಥಳಕ್ಕಾಗಮಿಸಿದ ಕಾನೂನು ಸಚಿವ ಸೋಮನಾಧ ಭಾರ್ತಿ, ರಾತ್ರಿ ವೇಳೆ ಮಹಿಳೆಯರಿದ್ದ ಮನೆಗೆ ದಾಳಿ ನಡೆಸುವಂತೆ ಪೊಲೀಸ್ ಅಧಿಕಾರಿಗೆ ಆದೇಶಿಸಿದ್ದರು.

ಇದಕ್ಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರಿ ಪೊಲೀಸ್ ಅಧಿಕಾರಿ, ಯಾವುದೇ ಬಂಧನ ವಾರೆಂಟ್ ಇಲ್ಲದೆ ರಾತ್ರಿ ವೇಳೆ ಮಹಿಳೆಯರಿರುವ ಮನೆಗೆ ನುಗ್ಗುವುದು ಕಾನೂನು ಬಾಹಿರ ಕೃತ್ಯವಾಗುವುದರಿಂದ ಆ ರೀತಿಯ ಸಿನಿಮೀಯ ಕೆಲಸಕ್ಕೆ ನಾನು ಮುಂದಾಗುವುದಿಲ್ಲವೆಂದು ಸುತರಾಂ ನಿರಾಕರಿಸಿದ್ದರು.

ಈ ವೇಳೆ ಸಚಿವ ಸೋಮನಾಥ ಭಾರ್ತಿ ತುಸು ಗರಂ ಆಗಿದ್ದರಿಂದಾಗಿ ಪರಸ್ಪರ ತುಸು ವಾಗ್ವಾದ ನಡೆಯಿತಾದರೂ ಅಷ್ಟರಲ್ಲೇ ಆಮ್ ಆದ್ಮಿ ಪಕ್ಷದ ಬೆಂಬಲಿಗರು ನೈತಿಕ ಪೊಲೀಸರಂತೆ ಮನೆಗೆ ನುಗ್ಗಿ ಕಪ್ಪು ಜನಾಂಗಕ್ಕೆ ಸೇರಿದ ನಾಲ್ವರು ಮಹಿಳೆಯರನ್ನು ಹೊರಗೆಳೆದು ಅವರನ್ನು ಶೌಚಾಲಯಕ್ಕೂ ಹೋಗಲು ಅವಕಾಶ ಕಲ್ಪಿಸದೆ ಬಂಧಿಸಿ ಅವರನ್ನು ಬಲತ್ಕಾರದಿಂದ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದರು. ಈ ವೈದ್ಯಕೀಯ ವರದಿಯಲ್ಲಿ ಮಹಿಳೆಯರು ಅಮಲು ಪದಾರ್ಥ ಸೇವಿಸಿರುವುದು ದೃಡಪಟ್ಟಿತ್ತು.

ಈ ಹಿಂದಿನಿಂದಲೂ ಜಾತಿ, ಧರ್ಮ, ವರ್ಣಬೇಧ, ಲಿಂಗ ತಾರತಮ್ಯ ಧೋರಣೆಯನ್ನು ಜನ್ಮಸಿದ್ಧ ಹಕ್ಕಿನಂತೆ ಪಾಲಿಸಿಕೊಂಡು ಬರಲಾಗುತ್ತಿರುವ ಬಹುತೇಕ ಭಾರತೀಯರ ಮನೋಭಾವನೆಯ ನಡುವೆ, ಇದೀಗ ಕಪ್ಪು ಜನಾಂಗಕ್ಕೆ ಸೇರಿರುವ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ಅವರ ವಿರುದ್ಧ ದೌರ್ಜ್ಯನ್ಯವೆಸಗಲಾಗಿದೆಯೇ ಎಂಬ ದೃಷ್ಟಿಕೋನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಚರ್ಚೆಯಾಗುತ್ತಿದ್ದು, ಈ ವಾದಕ್ಕೆ ಪುಷ್ಟಿ ನೀಡುವಂತೆ, ಭಾರತದಲ್ಲಿ ಕಪ್ಪು ಜನಾಂಗಕ್ಕೆ ಸೇರಿದ್ದವರನ್ನು ತೀರಾ ತುಚ್ಛವಾಗಿ ಕಾಣುವುದು ಸಹಜವಾದದ್ದು ಎಂದು ಇಲ್ಲಿ ಕಲಿಕೆಗೆ ಬಂದ ವಿದ್ಯಾರ್ಥಿಗಳು ಕೂಡ ತಮ್ಮ ನೋವಿನ ಅನುಭವ ತೋಡಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ನಡುವೆಯೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಭಟನೆ ಮುಂದುವರೆಸಿದ್ದು, ತನ್ನ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ರಾಷ್ಟ್ರ ಗೌರವದ ಸಂಕೇತವಾದ ಪಥಸಂಚಲನಕ್ಕೆ ಅಡ್ಡಿಪಡಿಸುವ ಮಾದರಿಯಲ್ಲಿ ತನ್ನ ಲಕ್ಷಾಂತರ ಬೆಂಬಲಿಗರೊಂದಿಗೆ ರಾಜಫಥಕ್ಕೆ ತೆರಳುವುದಾಗಿ ಬೆದರಿಕೆಯೊಡ್ಡಿರುವುದು ಈ ದೇಶದ ಶಿಕ್ಷಣ ಪಡೆದು ಈ ದೇಶವನ್ನ ಗೌರವಿಸುವ ಪ್ರಜ್ಞಾವಂತರನ್ನು ಇರುಸುಮುರಿಸುಗೊಳಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರದ್ದು ಒಂಚೂರು ಅತಿಯಾಯ್ತಾ ಎಂಬ ಪ್ರಶ್ನೆಯೂ ಮೊಳಗಿದೆ.

ಆಮ್ ಆದ್ಮಿ ಬೆಂಬಲಿಗರು ಸಹಸ್ರ ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸುತ್ತಿರುವುದರಿಂದಾಗಿ ಪಥಸಂಚಲನದ ತರಬೇತಿ ನಡೆಸುತ್ತಿರುವ ಸೇನಾ ದಳದವರಿಗೆ ಹಾಗೂ ಪೊಲೀಸ್ ಪಡೆಗಳಿಗೆ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ತೊಡಕಾಗುವುದಿಲ್ಲವೇ...? ಪಥಸಂಚಲನ ತರಬೇತಿಯಲ್ಲಿ ಪಾಲ್ಗೊಂಡಿರುವವರ ಸುರಕ್ಷತೆಯ ನಿಟ್ಟಿನಲ್ಲಿ ಹೋರಾಟಗಾರರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಸುಶಿಲ್ ಕುಮಾರ್ ಶಿಂದೆ, ಅವರಿಗೆ ಏನೇನು ಮಾಡಬೇಕೆನಿಸುತ್ತದೋ ಮಾಡಲಿ ಎಂದಷ್ಟೇ ಉತ್ತರಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ಬೆರಳೆಣಿಕೆಯಷ್ಟೇ ದಿನಗಳು ಬಾಕಿಯಿರುವ ಸಂದರ್ಭ, ಈ ದೇಶದ ಎಲ್ಲಾ ರಾಜ್ಯದ ಪ್ರತಿನಿಧಿಗಳು ಭಾಗವಹಿಸಿ ಪ್ರಾಯೋಗಿಕ ಕವಾಯತು ನಡೆಸುತ್ತಿರುವ ಸಂದರ್ಭದಲ್ಲಿ ಈ ರೀತಿ ಪ್ರತಿಭಟನೆ ನಡೆಸುವುದು ಒಂಥರಾ ಗಲೀಜು ಅನಿಸುವುದಿಲ್ಲವೇ...? ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಸಂದರ್ಭ ಸಕಲ ಸಿದ್ಧತೆ ನಡೆಸುತ್ತಿರುವ ವೇಳೆಯೇ ಈ ರೀತಿಯ ರಾಜಕೀಯ ವಿದ್ಯಮಾನಗಳಿಂದ ನಮ್ಮ ರಾಷ್ಟ್ರದ ಘನತೆ ಕುಗ್ಗುವುದಿಲ್ಲವೇ....? ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ತಲೆ ತಗ್ಗಿಸುವಂತಾಗುವುದಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಹೆಚ್ಚಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸುಶಿಲ್ ಕುಮಾರ್ ಶಿಂದೆ, ಅದೆಲ್ಲವನ್ನೂ ಈ ದೇಶದ ಪ್ರಜೆಯಾಗಿ ಮುಖ್ಯಮಂತ್ರಿ ಕೇಜ್ರಿವಾಲ್ ಯೋಚನೆ ಮಾಡಬೇಕಾಗಿತ್ತು ಎಂದಿದ್ದಾರೆ.

ಸೋಮವಾರದಿಂದ ಹಗಲು ರಾತ್ರಿ ಧರಣಿ ನಡೆಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಆರು ಮಂದಿ ಸಂಪುಟ ಸಚಿವರು ಸಾಥ್ ನೀಡಿದ್ದು, ಸಹಸ್ರ ಸಂಖ್ಯೆಯ ಬೆಂಬಲಿಗರೂ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯ ವೇಳೆ ಆಮ್ ಆದ್ಮಿ ಕಾರ್ಯಕರ್ತರು ರೊಚ್ಚಿಗೆದ್ದು ಪೊಲೀಸರು ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆಗಳನ್ನು ಭೇದಿಸಿ ಕಾನೂನು ಉಲ್ಲಂಘಿಸಿದ್ದ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಅದರ ಮುಂದುವರಿದ ಭಾಗವಾಗಿ ಕೆಲವೊಂದು ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟವೂ ನಡೆಯಿತೆನ್ನಲಾಗಿದೆ. ಈ ಸಂಬಂಧ ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅಥವಾ ತಥಾಕಥಿತ ಆಮ್ ಆದ್ಮಿ ಪಕ್ಷ ಕಾರ್ಯಕರ್ತರ ಕಿರಿಕ್’ಗೆ ಪೊಲೀಸರೂ ಕಾನೂನು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ವೇಳೆ ಬೋಲೋ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಿರುವ ಆಮ್ ಆದ್ಮಿ ಬೆಂಬಲಿಗರು, ಒಗ್ಗಟ್ಟಿನ ಘೋಷಣೆಗಳನ್ನು ಸಂಗೋಪಸಂಗವಾಗಿ ಕೂಗುತ್ತಾ ಕುಣಿದಾಡುತ್ತಾ, ಚಪ್ಪಾಳೆ ತಟ್ಟುತ್ತಾ ಇದೇ ನಿಜವಾದ ಗಣರಾಜ್ಯೋತ್ಸವ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕೂಗು ದೃಶ್ಯಮಾದ್ಯಮಗಳಲ್ಲಿ ಕಂಡುಬಂದಿದೆ.

ಈ ನಡುವೆ  ಭಾರತದಲ್ಲಿ ಕರಿಯ ಜನಾಂಗವನ್ನು ವಿಶೇಷವಾಗಿ ಆಫ್ರಿಕಾ, ಉಗಾಂಡ, ನೈಜೀರಿಯಾದ ನಾಗರಿಕರನ್ನು ತೀರಾ ತುಚ್ಛಮಟ್ಟದಲ್ಲಿ ಕಾಣುತ್ತಿರುವುದಾಗಿ ಆರೋಪ ಕೇಳಿಬಂದಿದ್ದು, ಬಹುತೇಕ ಭಾರತೀಯ ಮನಸು ನೀಗ್ರೋ ಜನಾಂಗವನ್ನು ಕಳ್ಳರಂತೆಯೂ, ವಂಚಕರಂತೆಯೂ ನೋಡುತ್ತಿದೆ ಎಂಬ ಕೂಗು ಕೇಳಿಬಂದಿದೆ. ವಿದೇಶಿ ಬಿಳಿಯ ಜನಾಂಗಕ್ಕೆ ಹೋಲಿಸಿದರೆ, ಕಪ್ಪು ಜನಾಂಗೀಯರು ಭಾರತದಲ್ಲಿ ತೀರಾ ಕಿರುಕುಳ ಎದುರಿಸುತ್ತಿದ್ದಾರೆಂಬ ಕೂಗು ಕೇಳಿಬಂದಿದೆ.

ಅಲ್ಲದೆ, ಸಾಮಾನ್ಯವಾಗಿ ವಿದೇಶಿ ಮಹಿಳೆಯರು ಅವರವರ ಆಚಾರ ವಿಚಾರಗಳಿಗೆ ಅನುಗುಣವಾಗಿ ಮುಕ್ತವಾಗಿ ಒಡನಾಡುವುದು, ಮದ್ಯಮಾನ, ದೂಮಪಾನ ಮಾಡುವುದು, ತಮ್ಮ ತಮ್ಮ ಗೆಳೆಯರೊಂದಿಗೆ ಲಿಂಗ ತಾರತಮ್ಯವಿಲ್ಲದೆ ಒಡನಾಡುವ ವಿಚಾರದಲ್ಲೂ ಬಿಳಿಯ ಜನಾಂಗದವರಿಗೆ ಹೋಲಿಸಿದರೆ ಭಾರತಕ್ಕೆ ಭೇಟಿ ನೀಡುವ ಕರಿಯ ಜನಾಂಗದವರಿಗೆ ತೀರಾ ಕಿರುಕುಳವಾಗುತ್ತಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ.

.....ಇಳಯರಾಜ.ಕೆ.ಸುಬ್ಬಯ್ಯ

ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

 

 

 

Add comment
 

More items in this section

ARCHIVED ARTICLES