FacebookTwitter

ಬಿಜೆಪಿ, ಕೆಜೆಪಿಯಲ್ಲಿ ತಿಕ್ಕಾಟ

    User Rating:  / 0

ಬೆಂಗಳೂರು: ಬಿಜೆಪಿ ಹಾಗೂ ಕೆಜೆಪಿ ನಾಯಕರ ವಾಕ್ಸಮರ ತಾರಕಕ್ಕೇರುತ್ತಿದೆ. ಶಿವಮೊಗ್ಗದಲ್ಲಿ ನಡೆದ 'ವಿಜಯ ಸಂಕಲ್ಪ ಯಾತ್ರೆ', ಹಾವೇರಿಯಲ್ಲಿ ನಡೆದ ರೋಡ್‌ಶೋನಲ್ಲಿ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದರೆ, ಚಾಮರಾಜನಗರದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಾತಿಗೆ ತಿರುಗೇಟು ನೀಡಿ 'ಕೇಂದ್ರದ ನಾಯಕರು ರಾಜ್ಯಕ್ಕೆ ನನ್ನನ್ನು ಹುಡುಕಿಕೊಂಡು ಬರುವಂತೆ ಮಾಡುತ್ತೇನೆ' ಎಂದು ಸವಾಲು ಹಾಕಿದರು.

ಶಿವಮೊಗ್ಗದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ಯಡಿಯೂರಪ್ಪ ತಾಕತ್ತಿದ್ದರೆ ಶಿಕಾರಿಪುರ ಉಳಿಸಿಕೊಳ್ಳಲಿ. ಹಿಂದೆ ಶಿಕಾರಿಪುರದಲ್ಲಿ ಅವರು ಸೋತಾಗ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಹಿಂಬಾಗಿಲ ಮೂಲಕ ವಿಧಾನಸೌಧ ಪ್ರವೇಶಿಸುವಂತೆ ಮಾಡಿದೆವು. ಈ ಬಾರಿ ಅವರು ಸೋತರೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವವರಾರೂ ಇಲ್ಲ ಎಂದರು.

ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಯಡಿಯೂರಪ್ಪ ಅವರು ಹೋದಲ್ಲಿ ಬಂದಲ್ಲಿ ಈಶ್ವರಪ್ಪ, ಅನಂತಕುಮಾರ್, ಪದ್ದಣ್ಣ (ಬಿಎಸ್‌ವೈ ಒಂದು ಕಾಲದ ಆತ್ಮೀಯ) ಬೆನ್ನಿಗೆ ಚೂರಿ ಹಾಕಿದರು, ಈಶ್ವರಪ್ಪ ಮನೆ ಮುರುಕ ಎಂದು ಟೀಕಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಪಕ್ಷವನ್ನು ಒಡೆಯುತ್ತಿರುವವರು ಯಾರು, ಯಾರು ಮನೆ ಮುರುಕರು ಎಂಬುದನ್ನು ಮೊದಲು ಅರಿಯಲಿ ಎಂದರು.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಬಿಜೆಪಿ ಮುಳುಗುವ ಹಡಗು ಎಂದು ಟೀಕಿಸಿದ್ದೀರಿ. ನಿಮ್ಮ (ಕೆಜೆಪಿ) ಹಡಗು ನೀರಿಗೂ ಇಳಿದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದೀರಿ. ಅದು ಎಲ್ಲಿ, ಎಷ್ಟು ಜನ, ಯಾವ ರೀತಿ ಚೂರಿ ಹಾಕಿದ್ದಾರೆ ಎಂದು ವಿವರಿಸಿ. ಈ ವಿಚಾರದಲ್ಲೂ ಸಂಶೋಧನೆಯೂ ಮಾಡಬೇಕಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡಿ, ನಮ್ಮದು ಮುಳುಗುವ ಹಡಗು ಎಂದು ಟೀಕಿಸುತ್ತಿರುವ ಯಡಿಯೂರಪ್ಪ ಈ ಹಿಂದೆ ನಮ್ಮ ಹಡಗಿನಲ್ಲಿದ್ದುಕೊಂಡೇ ಅದಕ್ಕೆ ತೂತು ಹೊಡೆಯುವ ಕೆಲಸ ಮಾಡಿದರು.

ನಾವು ತೂತು ಹೊಡೆಯಬೇಡಿ ಎಂದು ಹೇಳಿದರೂ ಕೇಳಲಿಲ್ಲ. ಈಗ ಅವರು ನಮ್ಮ ಹಡಗಿನಿಂದ ಹೊರ ಹೋಗಿದ್ದರಿಂದ ನಮ್ಮ ಹಡಗು ಸೇಫ್ ಆಗಿದೆ ಎಂದರು.

ನಾವೇನು ಷಂಡರಲ್ಲ: ರಾಜ್ಯಸಭೆ ಸದಸ್ಯ ಆಯನೂರ್ ಮಂಜುನಾಥ್ ಮಾತನಾಡಿ, ಬಿಎಸ್‌ವೈ ಸವಾಲು ಹಾಕಿ ನಮ್ಮನ್ನು ಕೆಣಕಿದ್ದಾರೆ. ನಾವೇನು(ಬಿಜೆಪಿ ನಾಯಕರು) ಷಂಡರಲ್ಲ. ಈ ಸವಾಲು ಸ್ವೀಕರಿಸುತ್ತೇವೆ. ಅವರ ಸವಾಲು ನಮ್ಮ ಪುರುಷತ್ವಕ್ಕೆ ಸವಾಲಿನ ಪ್ರಶ್ನೆ ಎಂದರು.

ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಡೀವಿ, ಡಿ. 9ರಂದು ಕೆಜೆಪಿ ಸ್ಥಾಪನೆಗೆ ಮುನ್ನುಡಿ ಬರೆದ ಹಾವೇರಿ ಜಿಲ್ಲೆಯಲ್ಲೇ ಕೆಜೆಪಿ ಅಧಃಪತನಕ್ಕೂ ಬೆನ್ನುಡಿ ಬರೆಯುವ ದಿನಗಳು ದೂರವಿಲ್ಲ. ಏ. 5ರ ನಂತರ ಇದೇ ಹಾವೇರಿಯಿಂದಲೇ ಕೆಜೆಪಿ ಅಧಃಪತನಕ್ಕೆ ನಾಂದಿಯಾಗಲಿದೆ. ಸಿಎಂ ಉದಾಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಕ್ಕೆ ನನ್ನ ಸಿಎಂ ಕುರ್ಚಿ ಕಳೆದುಕೊಂಡೇ ಎಂದರು.

ತಪ್ಪು ಮಾಡಿಬಿಟ್ಟೆ: ಚಾಮರಾಜನಗರದಲ್ಲಿ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕಳೆದ ಚುನಾವಣೆಯಲ್ಲಿ ನನ್ನ ನೇತೃತ್ವದಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚಿಸಲಾಗಿತ್ತು. ಭ್ರಷ್ಟಾಚಾರದ ಆರೋಪ ಹೊರೆಸಿ ರಾಜಿನಾಮೆ ನೀಡಿ ಎಂದಾಗ ನನಗೆ 70 ಮಂದಿ ಶಾಸಕರ ಬೆಂಬಲ ಇತ್ತು. ಆದರೂ ನಾನು ಹಿರಿಯರ ಮಾತಿಗೆ ಬೆಲೆ ಕೊಟ್ಟು ರಾಜಿನಾಮೆ ನೀಡಿದೆ. ಅದರ ಬದಲು ಸರ್ಕಾರ ವಿಸರ್ಜನೆ ಮಾಡಿದ್ದರೆ ಇಂದು ನನಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಪಶ್ಚಾತಾಪ ವ್ಯಕ್ತಪಡಿಸಿದರು. ವರಿಷ್ಠರ ಮಾತು ಕೇಳಿ ತಪ್ಪು ಮಾಡಿದೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಮೂಲಕ ಅನಂತಕುಮಾರ್ ಕುತಂತ್ರ ರಾಜಕಾರಣ ಮಾಡಿದರು. ಬೆನ್ನಿಗೆ ಚೂರಿ ಹಾಕುವ ಕೆಲಸ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮತ್ತು ಜೆ.ಎಚ್. ಪಟೇಲ್ ಅವರ ಕಾಲದಲ್ಲೂ ನಡೆದಿತ್ತು. ಇದೀಗ ನನಗೂ ಅಂಥದೇ ಸ್ಥಿತಿ ಬಂದಿದೆ. ಇದಕ್ಕೆ ಮತದಾರರು ತಕ್ಕ ಶಿಕ್ಷೆ ನೀಡಲಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ಪಕ್ಷ ಕಟ್ಟಿದ್ದೇನೆ. ಕೇಂದ್ರದ ನಾಯಕರು ಯಡಿಯೂರಪ್ಪನನ್ನು ಹುಡುಕಿಕೊಂಡು ರಾಜ್ಯಕ್ಕೆ ಬರುವಂತೆ ಮಾಡುತ್ತೇನೆ ಎಂದರು.

 

 

 

Add comment
 

More items in this section

ARCHIVED ARTICLES