FacebookTwitter

ಲೈಂಗಿಕ ಕಿರುಕುಳಕ್ಕೆ ಬೇಸತ್ತು ದಯಾಮರಣ ಕೋರಿದ ಮಹಿಳೆ

    User Rating:  / 0

ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಮಹಿಳೆ ದಯಾಮರಣಕ್ಕೆ ಮೊರೆ

ಕೊಪ್ಪಳ: ಸಂಬಂಧಿಕರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಅದರಿಂದ ಬೇಸತ್ತು, ಮಹಿಳೆಯೊಬ್ಬಳು ದಯಾಮರಣ ಕೋರಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾಳೆ.

ಈಗಾಗಲೇ ಸಂಬಂಧಿಕರ ದೌರ್ಜನ್ಯದಿಂದಲೇ ತಂದೆಯನ್ನು ಕಳೆದುಕೊಂಡು ನಲುಗಿ ಹೋಗಿರುವ ಮಹಿಳೆ, ಅರೆಹುಚ್ಚಿ ತಾಯಿ, ತನ್ನಿಬ್ಬರ ಸಹೋದರಿಯೊಂದಿಗೆ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾಳೆ. ಇವರೆಲ್ಲರನ್ನೂ ದುಡಿದೇ ಸಾಕುವ ಪ್ರಮೇಯ ಈ ಮಹಿಳೆಗೆ ಒದಗಿಬಂದಿದ್ದು, ಇವಳಿಗೆ ಸಂಬಂಧಿಕರು ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.

ಇದು, ಕೊಪ್ಪಳ ತಾಲೂಕಿನ ಕ್ಯಾಸಲಾಪುರ ಗ್ರಾಮದ ಮಹಿಳೆ ಬಸಮ್ಮ ಸವಣೂರು ಅವರ ಸದ್ಯದ ಪರಿಸ್ಥಿತಿ.

ಸಂಬಂಧಿಕರು ನೀಡುತ್ತಿರುವ ಕಿರುಕುಳದಿಂದ ತಮಗೆ ಮುಕ್ತಿ ಕೊಡಿಸಬೇಕು. ಹದಿನೈದು ದಿನದೊಳಗೆ ಇದಕ್ಕೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ನಾನು ಸಾಯಲು ಸಿದ್ಧ ಎಂಬ ಒಕ್ಕಣೆ ಇರುವ ಪತ್ರವನ್ನು ಬರೆದಿದ್ದಾಳೆ.

ಇದ್ದ ಜಮೀನು ಹೋಯ್ತು: ಗುಡಿಸಲಲ್ಲಿ ವಾಸಿಸುವ ನಮಗೆ 2 ಎಕರೆ ಜಮೀನಿದೆ. ಇದನ್ನು ಸುಮಾರು ವರ್ಷಗಳಿಂದ ದೌರ್ಜನ್ಯ ಮಾಡಿ, ಸಂಬಂಧಿಕರೇ ಅನುಭವಿಸುತ್ತಿದ್ದಾರೆ. ಅರೆಹುಚ್ಚಿ ತಾಯಿ, ಸಹೋದರಿಯರು ಹಾಗೂ ನನ್ನನ್ನು ಊರು ಬಿಡಿಸಿ, ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ನಮಗೆ ಯಾರಿಂದಲೂ ರಕ್ಷಣೆ ದೊರೆಯುತ್ತಿಲ್ಲ. ಅಳವಂಡಿ ಪೊಲೀಸ್ ಠಾಣೆ ಸುತ್ತಾಡಿ, ಸುಸ್ತಾಗಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ನಮಗೆ ರಕ್ಷಣೆ ಕೊಡಿ, ಇಲ್ಲ ಸಾಯಲು ಅವಕಾಶ ಕೊಡಿ ಎಂದು ತನ್ನ ಅಳಲನ್ನು ಪತ್ರದಲ್ಲಿ ತಿಳಿಸಿದ್ದಾಳೆ.

'ಒಮ್ಮೆಯಲ್ಲ ಹತ್ತಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೈಯೆಲ್ಲ ಪರಚಿದ್ದಾರೆ' ಎಂದು ಮೈಮೇಲಾದ ಗಾಯಗಳನ್ನು ತೋರಿಸುತ್ತ ಕಣ್ಣೀರಿಟ್ಟಳು ಮಹಿಳೆ. 'ದಿಕ್ಕಿಲ್ಲದ ನಮಗೆ ಯಾರೂ ರಕ್ಷಣೆ ನೀಡುತ್ತಿಲ್ಲ. ಸಂಬಂಧಿಕರ ವಿರುದ್ಧ ಯಾರೂ ಸಿಡಿದೇಳುವುದಿಲ್ಲ. ಹಗಲು ವೇಳೆಯಲ್ಲಿ ಮನೆ ಮುಂದೆ ಹೀಗೆ ದೌರ್ಜನ್ಯ ಮಾಡುತ್ತಿದ್ದರೂ ಯಾರೂ ಕೇಳುವುದಿಲ್ಲ. ಕೇಳಿದವರ ಮೇಲೆಯೇ ಅವರು ಎರಗಿ ಬೀಳುತ್ತಾರೆ' ಎನ್ನುತ್ತಾಳೆ ಆಕೆ.

'ಕಳೆದ ಆರು ತಿಂಗಳ ಹಿಂದೆ ಈ ದೌರ್ಜನ್ಯ ಅತಿಯಾದಾಗ ಪೊಲೀಸರಿಗೆ ದೂರು ನೀಡಿದ್ದೆವು. ಅವರೇ ನಮ್ಮನ್ನು ಹಾಗೂ ದೌರ್ಜನ್ಯ ಮಾಡಿದವರನ್ನು ಕರೆಸಿ, ಬೈದು ಕಳುಹಿಸಿದ್ದರು.  

ಇನ್ನೊಂದು ಸಾರಿ ಹೀಗಾಗದಂತೆ ನೋಡಿಕೊಳ್ಳವಂತೆಯೂ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಕಿರುಕುಳ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ' ಹಿಂದಿನ ಘಟನೆಯನ್ನು ವಿವರಿಸಿದ್ದಾಳೆ ಆಕೆ.

ಕೂಲಿ ಮಾಡಿ ಬಂದು, ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಪೊಲೀಸ್ ಠಾಣೆಗೆ ಹೇಳಿದರೂ ಅವರು ನಮ್ಮ ಗೋಳು ಕೇಳುತ್ತಿಲ್ಲ. ಸಹಾಯಕ್ಕೂ ಬರುತ್ತಿಲ್ಲ. ಹೀಗಾಗಿ, ನಮಗೆ ಜೀವನವೇ ಸಾಕಾಗಿದೆ ಎಂದು ನೊಂದು ನುಡಿದಿದ್ದಾಳೆ.

ಬಂಧಿಸಲು ಆಗ್ರಹ: ಈ ಪತ್ರ ತಲುಪಿದ ಕೂಡಲೇ ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಾದ ಚಂದ್ರಪ್ಪ, ಮಹಾದೇವಿ, ಮಾರುತಿ, ದ್ಯಾಮವ್ವ ಅವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾಳೆ. ಇವರೆಲ್ಲರೂ ಸಂಬಂಧಿಕರೇ ಆಗಿದ್ದರೂ, ಕ್ರೂರವಾಗಿ ವರ್ತಿಸುತ್ತಿದ್ದಾರೆ. ಇಂಥವರ ಕಾಟದಿಂದ ನಮ್ಮನ್ನು ಪಾರು ಮಾಡಿ ಎಂದು ಪತ್ರದಲ್ಲಿ ಆಗ್ರಹಿಸಿದ್ದಾಳೆ.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರಿಗೂ ಕಳೆದೆರಡು ದಿನಗಳ ಹಿಂದೆ ರಿಜಿಸ್ಟರ್ ಪೋಸ್ಟ್ ಮೂಲಕ ಮನವಿ ಸಲ್ಲಿಸಿದ್ದಾರೆ.

ಈ ಪತ್ರ ತಲುಪಿದ ಹದಿನೈದು ದಿನದೊಳಗಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ತಿಳಿಯಬೇಕು. ಇಲ್ಲದಿದ್ದರೆ ತಾವು ಒಪ್ಪಿದ್ದೀರಿ ಎಂದು ಮರಣಕ್ಕೆ ಶರಣಾಗುತ್ತೇನೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾಳೆ ಯುವತಿ.

 

 

 

Add comment
 

More items in this section

ARCHIVED ARTICLES