FacebookTwitter

ಅಮರಾವತಿಯಲ್ಲಿ ಇಂಡಿಯಾಬುಲ್ಸ್ ಮೇಲೆ ದಾಂಧಲೆ

    User Rating:  / 0

ನಾಗಪುರ(ಮಾ.26): ಮಹಾರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನಾ ಸಂಸ್ಥೆ ಇಂಡಿಯಾ ಬುಲ್ಸ್ ಕಚೇರಿಯ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಕಚೇರಿಗೆ ನುಗ್ಗಿ ಗಲಾಟೆ ಮಾಡಿದ ಏಳು ಕಿಡಿಗೇಡಿಗಳನ್ನ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರಿರಬಹುದೆಂದು ಶಂಕಿಸಲಾಗಿದೆ.

ಆ ಏಳು ದುಷ್ಕರ್ಮಿಗಳ ಪೈಕಿ ಇಬ್ಬರು ಮಹಿಳೆಯರಿದ್ದರೆಂದೂ, ಆ ಎಲ್ಲಾ ಏಳು ಮಂದಿಯನ್ನು ಗುರುತಿಸಲಾಗಿದ್ದು ಅವರಿಗಾಗಿ ಶೋಧ ನಡೆಸಿದ್ದೇವೆ ಎಂದು ಅಮರಾವತಿ ಪೊಲೀಸ್ ಆಯುಕ್ತ ಅಜಿತ್ ಪಾಟೀಲ್ ಹೇಳಿದ್ದಾರೆ...

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಮೊನ್ನೆ ಭಾನುವಾರವಷ್ಟೇ ಅಮರಾವತಿಯಲ್ಲೇ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದರು. ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಪೂರೈಕೆಗಾಗಿ ಮೀಸಲಿದ್ದ ವಾರ್ಧಾ ಮೇಲ್ದಂಡೆಯ ನೀರನ್ನು ಇಂಡಿಯಾಬುಲ್ಸ್ ವಿದ್ಯುತ್ ಕಂಪನಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ನಿಮ್ಮ ನೀರನ್ನು ಈ ವಿದ್ಯುತ್ ಘಟಕಕ್ಕೆ ನೀಡಲಾಗುತ್ತಿದೆ. ನಾಳೆ ನೀವು ಬೀದಿಗಿಳಿದು ಹೋರಾಡುವ ಮೂಲಕ ಈ ಅನ್ಯಾಯವನ್ನು ತಡೆಯಬೇಕು ಎಂದು ಎಂಎನ್ಎಸ್ ಮುಖ್ಯಸ್ಥ ಠಾಕ್ರೆ ಉಗ್ರ ಭಾಷಣ ಮಾಡಿದ್ದರು.

ಕಾಕತಾಳೀಯವೆಂಬಂತೆ, ಠಾಕ್ರೆ ಕರೆ ನೀಡಿದ ಹಾಗೆಯೇ 15 ಜನರ ಸಣ್ಣ ಗುಂಪೊಂದು ಮಾರನೇ ದಿನ, ಅಂದರೆ ಸೋಮವಾರ ಅಮರಾವತಿ ಕ್ಯಾಂಪಿನಲ್ಲಿರುವ ಇಂಡಿಯಾಬುಲ್ಸ್ ಕಂಪನಿಯ ಕಚೇರಿಗೆ ನುಗ್ಗಿ ಸಿಕ್ಕಸಿಕ್ಕಿದ್ದನ್ನು ಧ್ವಂಸ ಮಾಡಿದ್ದಾರೆನ್ನಲಾಗಿದೆ. ಕಚೇರಿಯ ಕಿಟಕಿ ಗಾಜುಗಳು ಹೊಡೆದಿವೆ... ಕಚೇರಿಯೊಳಗಿನ ಹಲ ವಸ್ತುಗಳು ಹಾಳು ಮಾಡಲಾಗಿದೆ ಎಂದು ಕಂಪನಿಯ ಅಧಿಕಾರಿ ಶಶಿಕಾಂತ್ ಒಹಾಲೆ ಹೇಳಿದ್ದಾರೆ...

ಇಂಡಿಯಾಬುಲ್ಸ್ ಸಂಸ್ಥೆ ಅಮರಾವತಿಯಲ್ಲಿ ಉಷ್ಣ ವಿದ್ಯುತ್ ಉತ್ಪಾದನೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದೆ. ಈ ಬಹುದೊಡ್ಡ ಯೋಜನೆಯ ಮೊದಲ ಹಂತದಲ್ಲಿ 270 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ 5 ಘಟಕಗಳ ಸ್ಥಾಪನೆಯಾಗಲಿದೆ. ಒಟ್ಟು 1,350 ಮೆ.ವ್ಯಾ.ನ ಈ ಮೊದಲ ಹಂತದ ಯೋಜನೆ ಬಹುತೇಕ ಸಿದ್ಧವಾಗಿದೆ ಎನ್ನಲಾಗಿದೆ.

 

 

 

Add comment
 

More items in this section

ARCHIVED ARTICLES