FacebookTwitter

ದೆಹಲಿಯಲ್ಲಿ ಬಿಎಸ್ಪಿ ಮುಖಂಡನ ಕೊಲೆ

    User Rating:  / 0

ಉದ್ಯಮಿ ಹಾಗೂ ಬಿಎಸ್ಪಿ ನಾಯಕ ದೀಪಕ್ ಭಾರದ್ವಾಜ್ ಗುಂಡೇಟಿಗೆ ಬಲಿ

ನವದೆಹಲಿ: ಉದ್ಯಮಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕ ದೀಪಕ್ ಭಾರದ್ವಾಜ್ ಅವರು ಮಂಗಳವಾರ ಮುಂಜಾನೆ ದೆಹಲಿಯ ದಕ್ಷಿಣ ವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಅಪರಿಚಿತ ಆಗಂತುಕರಿಂದ ಹತರಾಗಿದ್ದಾರೆ.

ಮೃತ ದೀಪಕ್ ಭಾರದ್ವಾಜ್ ಅವರಿಗೆ 62 ವರ್ಷ ವಯಸ್ಸಾಗಿದ್ದು, ಇವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಲ್ಲದೆ, ರಿಯಲ್ ಎಸ್ಟೇಟ್ ಉದ್ಯಮ, ಹೊಟೇಲ್ ಉದ್ಯಮ, ಶಿಕ್ಷಣ (ಉದ್ಯಮ) ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ದೆಹಲಿಯ ದಕ್ಷಿಣ ವಲಯದ ದ್ವಾರಕಾ ಮತ್ತು ಧಾನ್ಸಾ ಪ್ರದೇಶದಲ್ಲಿ ಎರಡು ಶಾಲೆ ತೆರೆಯುವ ಯೋಜನೆಯೂ ಇವರ ಮುಂದಿತ್ತು. ಅಲ್ಲದೆ, ಹರಿದ್ವಾರದಲ್ಲಿ ನಗರೀಕರಣ ಯೋಜನೆ ಮತ್ತು ದೆಹಲಿ-ಗುರುಗಾಂವ್ ಹೆದ್ದಾರಿಯಲ್ಲಿ ಹೊಟೇಲ್ ಸ್ಥಾಪಿಸುವ ಎಲ್ಲಾ ಸಿದ್ಧತೆ ನಡೆದಿತ್ತು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇವರ ಹತ್ಯೆಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ನಿಕಟ ಸಂಬಂಧವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಕೋಡಾ ಕಾರಿನಲ್ಲಿ ವೇಗವಾಗಿ ಬಂದ ಇಬ್ಬರು ಆಗಂತುಕರು ಸೀದಾ ಇವರ ತೋಟದ ನಿವಾಸದೊಳಕ್ಕೆ ಪ್ರವೇಶಿಸಲು ಯತ್ನಿಸಿದರೆನ್ನಲಾಗಿದೆ. ಇದೇ ಸಂದರ್ಭ ತಡೆಯೊಡ್ಡಿದ ಕಾವಲುಗಾರನಿಗೂ ಗುಂಡು ಹಾರಿಸಿ ಒಳ ಪ್ರವೇಶಿಸಿದ ಅಪರಿಚಿತರು ದೀಪಕ್ ಭಾರದ್ವಾಜ್ ಅವರ ಎದೆಯ ಭಾಗಕ್ಕೆ ಮೂರು ಗುಂಡು ಹಾರಿಸಿದ್ದಾರೆ.

ಗಾಯಗೊಂಡ ದೀಪಕ್ ಭಾರದ್ವಾಜ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ.

ಮನೆಯ ಸುತ್ತಮುತ್ತಲೂ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ಭೇದಿಸಲು ಪ್ರತ್ಯೇಕ ಆರು ತಂಡಗಳನ್ನು ರಚಿಸಲಾಗಿದ್ದು ತನಿಖೆ ಚುರುಕುಗೊಂಡಿದೆ.

 

 

 

 

Add comment




 

More items in this section

ARCHIVED ARTICLES