FacebookTwitter

ಬಿಜೆಪಿಯಿಂದ ರೇಣುಕಾಚಾರ್ಯ ಉಚ್ಚಾಟನೆ

    User Rating:  / 1

ಬೆಂಗಳೂರು/ದಾವಣಗೆರೆ: ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ರೇಣುಕಾಚಾರ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಲ್ಲದೇ, ಅವರು ಸಿಎಂ ಆಗಿದ್ದಾಗ ನಾನೇ ಅವರಿಗೆ ಹಣ ಕೊಟ್ಟಿದ್ದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮತ್ತು ಪಕ್ಷ ವಿರೋಧಿ ಆರೋಪದ ಮೇಲೆ ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.

ಡೀವಿಗೆ ಹಣ ಕೊಡಿಸಿದ್ದೆ ಎಂದಿದ್ದ ರೇಣು: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲದಂತಹ ಡಿ.ವಿ. ಸದಾನಂದಗೌಡರು ಹಿಂದೆ ಸಂಸದರಿದ್ದಾಗ ನನ್ನ ಬಳಿ ಹಣಕ್ಕಾಗಿ ಕಣ್ಣೀರಿಟ್ಟಿದ್ದರು. ನಾನು ಆಗ ಅವರಿಗೆ ಹಣ ಕೊಡಿಸಿದ್ದೆ. ಸಿಎಂ ಆದ ನಂತರ ಉಪ ನೋಂದಣಾಧಿಕಾರಿಗಳೂ ಸೇರಿದಂತೆ ಅಧಿಕಾರಿಗಳಿಂದ ಸದಾನಂದಗೌಡರು ಹಣ ಸಂಗ್ರಹಿಸಿದ ಬಗ್ಗೆ ಶೀಘ್ರದಲ್ಲೇ ಎಲ್ಲಾ ದಾಖಲೆ ಬಹಿರಂಗಪಡಿಸುವುದಾಗಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಂಗಳವಾರ ಬೆಳಗ್ಗೆಯಷ್ಟೇ ಆರೋಪಿಸಿದ್ದರು.

ತಮ್ಮನ್ನು ಬಿಟ್ಟರೆ ಬೇರೆ ಯಾರೂ ಪ್ರಾಮಾಣಿಕರೇ ಇಲ್ಲವೆಂಬಂತೆ ವರ್ತಿಸುವ ಇದೇ ಸದಾನಂದಗೌಡರು ನಾನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಲ್ಲಿನ ಪ್ರವಾಸಿ ಮಂದಿರದಲ್ಲಿ ಹಣಕ್ಕಾಗಿ ನನ್ನ ಮುಂದೆ ಕಣ್ಣೀರು ಸುರಿಸಿದ್ದರು. ಆಗ ನಾನು ಹಣದ ವ್ಯವಸ್ಥೆ ಮಾಡಿದ್ದೆ. ಎಷ್ಟು ಹಣವನ್ನು ಕೊಡಿಸಿದೆ? ಯಾವಾಗ ಕೊಡಿಸಿದೆ? ಹೇಗೆ ಕೊಡಿಸಿದೆ ಎಂಬುದನ್ನು ಶೀಘ್ರದಲ್ಲೇ ದಾಖಲೆಗಳ ಸಮೇತವೇ ನಾಡಿನ ಜನತೆ ಮುಂದೆ ಬಿಚ್ಚಿಡಲಿದ್ದೇನೆ ಎಂದು ಅವರು ಹೇಳಿದ್ದರು.

 

 

 

Add comment
 

More items in this section

ARCHIVED ARTICLES