FacebookTwitter

ಬೀದರ್ ಕ್ಷೇತ್ರಗಳ ಪರಿಚಯ

    User Rating:  / 0

ಬಹಮನಿ ಸುಲ್ತಾನರು ಆಳಿದ ನಾಡು ಬೀದರ್. ವಿಶ್ವವಿಖ್ಯಾತ ಬಿದ್ರಿ ಕಲೆಯ ಬೀಡು. ಬಸವಣ್ಣನ ನೆಲೆವೀಡು.. ಐತಿಹಾಸಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಜಿಲ್ಲೆ ಬೀದರ್. ಕಮಠಾಣಾದ ಜೈನ ಮಂದಿರ, ಕಾರಂಜಾ ಜಲಾಶಯ, ಹುಮ್ನಾಬಾದ್ ತಾಲೂಕಿನಲ್ಲಿರುವ ಜಲಸಂಗಿ, ಹಣಕುಣಿ ಕೋಟೆ, ಬಸವಕಲ್ಯಾಣದ ಕೋಟೆ, ಹೀಗೆ ಪ್ರತಿಯೊಂದೂ ಸ್ಥಳವೂ ಬೀದರ್ ಜಿಲ್ಲೆಯ ಕಥೆ ಹೇಳುತ್ತದೆ..

ಉತ್ತರ ಕರ್ನಾಟಕದ ಉರಿಬಿಸಿಲು, ಆಂಧ್ರ, ಮಹಾರಾಷ್ಟ್ರ ಗಡಿಭಾಗದ ಗದ್ದಲಗಳ ನಡುವೆಯೇ ಬೀದರ್ ಇದೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ, ಜೆಡಿಎಸ್ ಪಕ್ಷದ ಬಂಡೆಪ್ಪ ಕಾಶಂಪೂರ್ ಸದ್ಯಕ್ಕೆ ಇಲ್ಲಿನ ರಾಜಕೀಯ ದಿಗ್ಗಜರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಧರಂಸಿಂಗ್ ಅವರಿಗೆ, ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಗರಿ ತೊಡಿಸಿದ್ದು ಇದೇ ಬೀದರ್ ಲೋಕಸಭಾ ಕ್ಷೇತ್ರ. ಆಗ ಧರ್ಮಸಿಂಗ್ಗೆ ಎದುರಾಳಿಯಾಗಿದ್ದವರು ಗುರುಪಾದಪ್ಪ ನಾಗಮಾರಪಳ್ಳಿ. ಬದಲಾದ ಪರಿಸ್ಥಿತಿಯಲ್ಲಿ ನಾಗಮಾರಪಳ್ಳಿ ಈಗ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದಾರೆ.

ವಿಧಾನಸಭಾ ಕ್ಷೇತ್ರಗಳು 6
1) ಬೀದರ್ ಉತ್ತರ ಕ್ಷೇತ್ರ
2) ಬೀದರ್ ದಕ್ಷಿಣ ಕ್ಷೇತ್ರ
3) ಹುಮನಾಬಾದ್
4) ಭಾಲ್ಕಿ
5) ಬಸವಕಲ್ಯಾಣ
6) ಔರಾದ್

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು, ಕಾಂಗ್ರೆಸ್ ಮೂರು ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದವು.

ಆದರೆ, ಕಳೆದ ಬಾರಿಯ ಪರಿಸ್ಥಿತಿಗೂ, ಈ ಬಾರಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಎರಡು ಹೊಸ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡು ಅಖಾಡಕ್ಕಿಳಿದಿವೆ. ಗುರುಪಾದಪ್ಪ ನಾಗಮಾರಪಳ್ಳಿ ಈಗ ಕೆಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬೀದರ್ ಉತ್ತರ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿದ್ದು, ವಿಧಾನಸಭೆ ಪ್ರವೇಶಿಸುವ ಆಲೋಚನೆಯಲ್ಲಿದ್ದಾರೆ. ಕಾಂಗ್ರೆಸ್ಸಿನ ಹಾಲಿ ಎಂಎಲ್ಎ ರಹೀಂಖಾನ್ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಇತ್ತ ಬಿಜೆಪಿಯಿಂದ ರಘುನಾಥ ಮಲ್ಕಾಪುರೆ, ಕುಶಾಲರಾವ್ ಪಾಟೀಲ್ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಯಾರೇ ಗೆಲ್ಲಬೇಕಾದ್ರೂ ಮುಸ್ಲಿಮರ ಮತ ಬೇಟೆಯೇ ಅಂತಿಮ ಅನ್ನೋ ಪರಿಸ್ಥಿತಿಯಿದೆ.

ಬೀದರ್ ದಕ್ಷಿಣದಲ್ಲಿ ಜೆಡಿಎಸ್ ಹಾಲಿ ಶಾಸಕ ಬಂಡೆಪ್ಪ ಕಾಶಂಪೂರ್ ಈ ಬಾರಿಯೂ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣದಲ್ಲೂ ರಾಜಕೀಯ ಲೆಕ್ಕಚಾರ ತುಸು ಜೋರಾಗಿಯೇ ಇದೆ.

ರಾಜಕೀಯ ಧ್ರುವೀಕರಣ, ಮುಖಂಡರ ಪಕ್ಷಾಂತರ ಬೀದರ್ ಜಿಲ್ಲೆಯ ರಾಜಕೀಯದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಸದ್ಯ ಗೆಲುವಿಗಾಗಿ ರಾಜಕೀಯ ಪಕ್ಷಗಳ ಮುಖಂಡರೆಲ್ಲಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಗಳಲ್ಲಿ ತಿರುಗಾಡುತ್ತಿದ್ದಾರೆ. ಜಿಲ್ಲೆಯ ಮತದಾರರ ಒಲವು ಯಾರ ಕಡೆ ಇದೆ ಅನ್ನೋ ಸುಳಿವು ಸದ್ಯಕ್ಕಂತೂ ಸಿಕ್ಕಿಲ್ಲ.

- ಅನಿಲಕುಮಾರ್ ದೇಶಮುಖ್, ಸುವರ್ಣನ್ಯೂಸ್

 

 

 

Add comment
 

More items in this section

ARCHIVED ARTICLES