FacebookTwitter

ಚಂಡಮಾರುತಗಳಿಗೆ ಹೆಸರುಗಳನ್ನಿಡೋದು ಹೇಗೆ ಗೊತ್ತಾ?

    User Rating:  / 0
    PoorBest 

ಬೆಂಗಳೂರು(ಅ.12): ನಮ್ಮ ಬಂಗಾಳ ಕೊಲ್ಲಿಯಲ್ಲಿ ಪೈಲೀನ್ ಚಂಡಮಾರುತದ ಆರ್ಭಟ ನೋಡುತ್ತಿದ್ದೇವೆ. ಹಿಂದೆಲ್ಲಾ ನೀಲಂ ಚಂಡಮಾರುತ ನೋಡಿದ್ದೇವೆ... ಅಮೆರಿಕದಲ್ಲಿ ಕತ್ರಿನಾ ಮೊದಲಾದ ಚಂಡಮಾರುತಗಳು ಭೀತಿ ಸೃಷ್ಟಿಸಿದ್ದನ್ನ ಕೇಳಿದ್ದೇವೆ. ಈ ಚಂಡಮಾರುತಗಳಿಗೆ ಯಾವ ರೀತಿ ಹೆಸರು ಇಡುತ್ತಾರೆ ಎಂಬುದು ನಿಜಕ್ಕೂ ಕುತೂಹಲದ ವಿಷಯವೇ...

ಹೆಸರು ಯಾಕೆ ಬೇಕು?
ಕೆಲ ಚಂಡಮಾರುತಗಳು ವಿವಿಧ ತೀವ್ರತೆಯನ್ನ ಮತ್ತು ವಿಶೇಷತೆಯನ್ನ ಒಳಗೊಂಡಿರುತ್ತವೆ. ಅವೆಲ್ಲವನ್ನೂ ತೀವ್ರತೆಯ ಆಧಾರದಲ್ಲಿ ವರ್ಗೀಕರಣ ಮಾಡಲು ಕಷ್ಟಸಾಧ್ಯ. ಹೀಗಾಗಿ, ಚಂಡಮಾರುತಗಳಿಗೆ ಹೆಸರನ್ನಿಟ್ಟರೆ ಅದರ ಕಾಲ, ಗುಣ ಹೀಗೆ ಹಲವು ವಿಷಯಗಳನ್ನ ಸುಲಭವಾಗಿ ಸಂಗ್ರಹಿಸಿಡಬಹುದು...

ಯಾವಾಗಿಂದ ಶುರು?
ಹಿಂದೆಲ್ಲಾ ಚಂಡಮಾರುತಗಳಿಗೆ ಹೆಸರನ್ನಿಡುವ ಗೋಜಿಗೆ ಹೋಗುತ್ತಿರಲಿಲ್ಲ. 17ನೇ ಶತಮಾನದಿಂದೀಚೆಗೆ ಕೆಲ ಕಡೆಗಳಲ್ಲಿ ಈ ನಾಮಕರಣದ ಪದ್ಧತಿ ಶುರುವಾಯಿತು. ಸಣ್ಣಪುಟ್ಟ ಬಿರುಗಾಳಿ, ಸುಂಟರಗಾಳಿ ಸೃಷ್ಟಿಯಾದಲ್ಲಿ ಅವಕ್ಕೆ ಹೆಸರನ್ನಿಡುತ್ತಿದ್ದರು. ಆ ಬಿರುಗಾಳಿ ಏನಾದರೂ ಚಂಡಮಾರುತವಾಗಿ ಪರಿವರ್ತಿತವಾದಲ್ಲಿ ಆ ಹೆಸರನ್ನ ಅದಕ್ಕೆ ಖಾಯಂ ಆಗಿ ಉಳಿಸಿಬಿಡುತ್ತಿದ್ದರು...

ಸಂತರ ಹೆಸರು...
ಕೆರಿಬಿಯನ್ ದ್ವೀಪಗಳಲ್ಲಿ ಜನರು ತಮ್ಮ ಸಾಧು-ಸಂತರ ಹೆಸರುಗಳನ್ನ ಚಂಡಮಾರುತಗಳಿಗೆ ಇಡುತ್ತಿದ್ದರಂತೆ. ರೋಮನ್-ಕೆಥೋಲಿಕ್ ಕ್ಯಾಲೆಂಡರ್'ನ ಪ್ರಕಾರ ಯಾವ ದಿನದಂದು ಚಂಡಮಾರುತವೇಳುತ್ತದೋ ಆ ದಿನದ ಸಂತರ ಹೆಸರನ್ನ ಆ ಚಂಡಮಾರುತಕ್ಕೆ ಇಡುವ ಪದ್ಧತಿ ಇತ್ತು...

ಹೆಂಗಸರ ಹೆಸರು...
ಎರಡನೇ ವಿಶ್ವ ಮಹಾಯುದ್ಧದ ಬಳಿಕ ಚಂಡಮಾರುತಗಳಿಗೆ ಹೆಂಗಸರ ಹೆಸರನ್ನಿಡುವ ಪದ್ಧತಿ ಜಾರಿಗೆ ಬಂತು. 1953ರಲ್ಲಿ ಅಮೆರಿಕ ಕೂಡ ಈ ಪದ್ಧತಿಯನ್ನ ಅಳವಡಿಸಿಕೊಂಡಿತು... ಕ್ಯೂ, ಯೂ, ಎಕ್ಸ್, ವೈ ಮತ್ತು ಝಡ್ ಹೊರತುಪಡಿಸಿ ಉಳಿದೆಲ್ಲಾ ಅಕ್ಷರಗಳಿಂದ ಶುರುವಾಗುವ ಹೆಂಗಸರ ಹೆಸರುಗಳನ್ನ ಚಂಡಮಾರುತಗಳಿಗೆ ಇಡಲಾಗುತ್ತಿತ್ತು... ಆದರೆ, 60 ಮತ್ತು 70ರ ದಶಕದಲ್ಲಿ ಅಮೆರಿಕದಲ್ಲಿ ಮಹಿಳಾ ಸಂಸ್ಥೆಗಳ ಪ್ರತಿಭಟನೆಯಿಂದಾಗಿ ಈ ಪರಿಪಾಠ ಬದಲಾಯಿತು. 1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು...

ಅಮೆರಿಕನ್ ಫಾರ್ಮುಲಾ...
ಯಾವುದೇ ವರ್ಷದ ಮೊದಲ ಬಿರುಗಾಳಿಗೆ "ಎ" ಅಕ್ಷರದಿಂದ ಶುರುವಾಗುವ ಹೆಸರನ್ನಿಡಲಾಗುತ್ತದೆ. ನಂತರದ್ದಕ್ಕೆ 'ಬಿ' ಅಕ್ಷರದ ಹೆಸರು.. ಹೀಗೆ ಸರಣಿ ಮುಂದುವರಿಯುತ್ತದೆ.

ಸಮಸಂಖ್ಯೆಯ(Even numbered) ವರ್ಷಗಳಲ್ಲಿ ಸಮಸಂಖ್ಯೆಯ ಬಿರುಗಾಳಿಗಳಿಗೆ ಮಹಿಳೆಯ ಹೆಸರುಗಳನ್ನೂ, ಬೆಸಸಂಖ್ಯೆಯ ಬಿರುಗಾಳಿಗಳಿಗೆ ಪುರುಷರ ಹೆಸರುಗಳನ್ನೂ ಇಡಲಾಗುತ್ತದೆ.

ಬೆಸಸಂಖ್ಯೆಯ(Odd numbered) ವರ್ಷಗಳಲ್ಲಿ ಬೆಸ ಸಂಖ್ಯೆಯ ಬಿರುಗಾಳಿಗಳಿಗೆ ಮಹಿಳೆಯರ ಹೆಸರುಗಳನ್ನೂ, ಸಮಸಂಖ್ಯೆಯ ಬಿರುಗಾಳಿಗಳಿಗೆ ಪುರುಷರ ಹೆಸರುಗಳನ್ನೂ ಇಡಲಾಗುತ್ತದೆ...

ಇಷ್ಟೇ ಅಲ್ಲ, ಚಂಡಮಾರುತವೇಳುವ ಪ್ರದೇಶಗಳ ನಿರ್ದಿಷ್ಟ ದೇಶಗಳು ನಾಮಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ...

ದಕ್ಷಿಣ ಏಷ್ಯಾದಲ್ಲಿ ಹೇಗೆ?
ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳು ಬಹಳಷ್ಟು ಆಗುತ್ತಲೇ ಇರುತ್ತವೆ. ಇಲ್ಲಿ ತೀರಾ ಇತ್ತೀಚೆಗೆ, ಅಂದರೆ 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಹೀಗೆ ಎಂಟು ರಾಷ್ಟ್ರಗಳು ಬರುತ್ತವೆ. ಈ ರಾಷ್ಟ್ರಗಳ ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ....

ನೀಲಂ ಚಂಡಮಾರುತಕ್ಕೆ ಹೆಸರನ್ನಿಟ್ಟಿದ್ದು ಪಾಕಿಸ್ತಾನ... ಕಳೆದ ವಾರ ಭೋರ್ಗರೆದ ಮುರ್ಜಾನ್ ಚಂಡಮಾರುತಕ್ಕೆ ಹೆಸರು ಬಂದಿದ್ದು ಓಮನ್ ದೇಶದಿಂದ. ಭಾರತ ಕೂಡ ಹಲವು ಚಂಡಮಾರುತಗಳಿಗೆ ಹೆಸರನ್ನಿಟ್ಟಿದೆ. 2004ರಲ್ಲಾದ ಚಂಡಮಾರುತಗಳಿಗೆ ಅಗ್ನಿ, ಆಕಾಶ್, ಬಿಜಲಿ, ಜಲ್  ಹೆಸರನ್ನಿಡಲಾಗಿದೆ. ಲೆಹೆರ್, ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹೆಸರಗಳು ಸರದಿಯಲ್ಲಿ ಕಾದುಕೊಂಡಿವೆ... ಉಳಿದ ರಾಷ್ಟ್ರಗಳೂ ಕೂಡ ಹೆಸರಗಳ ಪಟ್ಟಿಯನ್ನಿಟ್ಟುಕೊಂಡಿವೆ...

ಪೈಲೀನ್ ಚಂಡಮಾರುತದ ಬಗ್ಗೆ...
ಈ ಪೈಲೀನ್ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಥಾಯ್ಲೆಂಡ್ ದೇಶ... ಆಂಗ್ಲಭಾಷೆಯಲ್ಲಿ Phailin ಎಂದು ಬರೆಯಲಾಗುವ ಇದರ ಸರಿಯಾದ ಸಂಬೋಧನೆ "ಪೈಲೀನ್" ಎಂದಿದೆ. ಕೆಲವರು ಇಂಗ್ಲೀಷ್ ಪದದ ಟ್ರಾನ್ಸ್'ಲಿಟರೇಶನ್ ಮಾಡಿ "ಫೈಲಿನ್" ಎಂದೂ ಬರೆಯುತ್ತಾರೆ. ಆದರೆ, ಥಾಯ್ಲೆಂಡಿನ ಭಾಷೆಯ ಪ್ರಕಾರ ಪೈಲೀನ್ ಸರಿಯಾದ ಸಂಬೋಧನೆ... ಈ ಪೈಲೀನ್ ಎಂದರೆ ಥಾಯ್ಲೆಂಡ್ ಭಾಷೆಯ ಪ್ರಕಾರ "ನೀಲಮಣಿ"(Sapphire)...


ಚಂಡಮಾರುತ ಅಂದರೇನು?
ಪೈಲಿನ್ ಎಫೆಕ್ಟ್-ಒಡಿಶಾದ್ಯಂತ ಭಾರೀ ಮಳೆ
`ಕತ್ರಿನಾ'ಗಿಂತ ಭೀಕರ ಪೈಲಿನ್ ಚಂಡಮಾರುತ, ಇಂದು ಸಂಜೆ ಒಡಿಶಾ ಕರಾವಳಿಗೆ ಎಂಟ್ರಿ

 

 

 

Add comment