FacebookTwitter

ತೆಲುಗು ಹೀರೋ ಉದಯ್ ಕಿರಣ್ ಆತ್ಮಹತ್ಯೆ

    User Rating:  / 0
    PoorBest 

ಹೈದರಾಬಾದ್(ಜ.06): ಟಾಲಿವುಡ್ ಹೀರೋ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. 33 ವರ್ಷದ ಉದಯೋನ್ಮುಖ ನಟ ಭಾನುವಾರ ರಾತ್ರಿ ಇಲ್ಲಿ ಪುಂಜಾಗುಟ್ಟದ ಶ್ರೀನಗರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವ ಉದಯ್ ಕಿರಣ್ ಅವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಯೇ ಕಾರಣವೆನ್ನಲಾಗುತ್ತಿದೆ.

1980ರ ಜನವರಿ 26 ರಂದು ಜನಿಸಿದ್ದ ಉದಯ್ ಕಿರಣ್ ಅವರ 34ನೇ ವರ್ಷದ ಜನ್ಮದಿನಕ್ಕೆ 20 ದಿನಗಳಷ್ಟೇ ಇದ್ದವು. ವರ್ಷದ ಹಿಂದಷ್ಟೇ ಅವರು ವಿಶಿತಾ ಎಂಬಾಕೆಯನ್ನ ಮದುವೆಯಾಗಿದ್ದರು. ಖಾಸಗಿ ಕೆಲಸದ ನಿಮಿತ್ತ ಪತ್ನಿ ಮಣಿಕೊಂಡಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಉದಯ್ ಕಿರಣ್ ಒಬ್ಬರೇ ಇದ್ದರು. ವಿಶಿಷ್ಟಾ ಅನೇಕ ಬಾರಿ ಪತಿಗೆ ಮೊಬೈಲ್ ಕರೆಗಳನ್ನ ಮಾಡಿದರೂ ಯಾವುದೇ ಉತ್ತರ ಬಾರದಿದ್ದಾಗ ಸಂಶಯಗೊಂಡು ಪಕ್ಕದ ಮನೆಯವರ ಸಹಾಯ ಯಾಚಿಸುತ್ತಾಳೆ. ಅಕ್ಕಪಕ್ಕದವರು ಮನೆಗೆ ಹೋಗಿ ನೋಡಿದಾಗ ನಟ ನೇಣುಬಿಗಿದುಕೊಂಡಿರುವುದು ಗೊತ್ತಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆದರೆ, ಉದಯ್ ಕಿರಣ್ ಬದುಕಿಲ್ಲ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸುತ್ತಾರೆ...

ಉದಯ್ ಕಿರಣ್ 2003ರಲ್ಲೇ ಚಿರಂಜೀವಿಯವರ ಪುತ್ರಿಯನ್ನ ಮದುವೆಯಾಗಲು ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ, ಕಾರಣಾಂತರದಿಂದ ಮದುವೆ ರದ್ದುಗೊಂಡಿತ್ತು.

ಸಿನಿಮಾ ವೃತ್ತಿ
ಉದಯ್ ಕಿರಣ್ 2000ರಲ್ಲಿ ತೇಜ ನಿರ್ದೇಶನದ "ಚಿತ್ರಂ" ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನುವ್ವ ನೇನು, ಮನಸಂತಾ ನುವ್ವೆ, ಶ್ರೀರಾಮ್ ಮೊದಲಾದ ಬ್ಲಾಕ್'ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಉದಯ್ ಕಿರಣ್ ಭಾರೀ ಭರವಸೆ ಮೂಡಿಸಿದ್ದರು. ಒಟ್ಟು 19 ಚಿತ್ರಗಳಲ್ಲಿ ನಟಿಸಿದ ಈ ಚಾಕೊಲೇಟ್ ಹೀರೋ ಈಗ್ಗೆ ಹತ್ತು ವರ್ಷಗಳಿಂದ ಸರಿಯಾದ ಅವಕಾಶಗಳಿಲ್ಲದೇ ಭಾರೀ ಸಂಕಷ್ಟದ ಸ್ಥಿತಿಯಲ್ಲಿದ್ದರೆನ್ನಲಾಗಿದೆ... ಅವರು ಕೆಲವಾರು ಚಿತ್ರಗಳಲ್ಲಿ ನಟಿಸಿದರಾದರೂ ಯಾವುದೇ ಚಿತ್ರವೂ ಹಿಟ್ ಆಗದೇ ಇದ್ದದ್ದು ಅವರಲ್ಲಿ ಹತಾಶೆ ಮೂಡಿಸಿತ್ತು. ಬಹುಶಃ ಇದೂ ಕೂಡ ಆತ್ಮಹತ್ಯೆಗೆ ಕಾರಣವಿದ್ದಿರಬಹುದೆಂದು ಶಂಕಿಸಲಾಗುತ್ತಿದೆ.

 

 

 

Add comment