ಆಮ್ ಆದ್ಮಿ ವಿರುದ್ಧ ಅಧಿಕ ಪ್ರಸಂಗ ಆರೋಪ

ಅರವಿಂದ್ ಕೇಜ್ರಿವಾಲ್, ಎಸಿಪಿ ಬಿ.ಎಸ್.ಜಕಾರ್, ಸೋಮನಾಥ ಭಾರ್ತಿ

ನವದೆಹಲಿ: ಮಾದ್ಯಮಗಳಿಂದ ಟೀಕೆಗಳ ಸುರಿಮಳೆಯ ನಡುವೆಯೂ ದೆಹಲಿ ವಿದಾನಸಭಾ ಚುನಾವಣೆಯಲ್ಲಿ ಸಿನಿಮೀಯ ರೀತಿಯಲ್ಲಿ ಎರಡನೇ ಅತೀ ದೊಡ್ಡಪಕ್ಷವಾಗಿ ಹೊರಹೊಮ್ಮಿ ಯಶಸ್ವಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಆರಂಭಿಸಿದ್ದ ದೂರು ಸ್ವೀಕರಿಸುವ ಯೋಜನೆ ಇದೀಗ ಉಲ್ಟ ಹೊಡೆದಿದ್ದು, ಈ ಯೋಜನೆಯ ಸದುಪಯೋಗಪಡೆಯಲು ಮುಂದಾದ ಸಾಂಪ್ರದಾಯಿಕ ಮಹಿಳೆಯರು ಸೇರಿದಂತೆ ಬಡಾವಣೆಯ ಸುತ್ತಮುತ್ತಲಿನ ಮಹಿಳೆಯರಲ್ಲಿ ಹಲವರು ಪಕ್ಷದ ಸಹಾಯವಾಣಿಗೆ ಕರೆ ಮಾಡಿ ತಮ್ಮ ಏರಿಯಾದಲ್ಲಿ ನಡೆಯುತ್ತಿರುವ ಅನುಚಿತ ನಡವಳಿಕೆ [ಅಕ್ರಮ ಚಟುವಟಿಕೆ] ಕುರಿತು ದೂರು ನೀಡಿದ್ದಕ್ಕೆ ಪ್ರತಿಕ್ರಿಯಿಸಲು ಮುಂದಾದ ಕಾನೂನು ಸಚಿವ ಸೋಮನಾಥ ಭಾರ್ತಿ, ಕಾನೂನಿಗೆ ವಿರುದ್ಧವಾಗಿ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆ ಇದೀಗ ವಿವಾದಕ್ಕೆ ಗುರಿಯಾಗಿದ್ದು ಸಚಿವರ ವಿರುದ್ಧ ಅಧಿಕ ಪ್ರಸಂಗದ ಆರೋಪ ಕೇಳಿಬಂದಿದೆ.

ಸ್ಥಳೀಯ ಮಹಿಳೆಯರು ನೀಡಿದ್ದ ದೂರನ್ನು ಆದರಿಸಿ ಸತ್ಯಾಸತ್ಯತೆ ಪರಿಶೀಲಿಸಲು ದಿಢೀರ್ ಕಾರ್ಯಾಚರಣೆಗೆ ಮುಂದಾದ ಕಾನೂನು ಸಚಿವ ಸೋಮನಾಥ ಭಾರ್ತಿ, ಪೊಲೀಸರ ಅಸಹಕಾರದ ನಡುವೆಯೂ ಬುಧವಾರ ರಾತ್ರಿ ಬಡಾವಣೆಯೊಂದಕ್ಕೆ ತೆರಳಿ ವಿದೇಶಿಯರು ವಾಸಿಸುತ್ತಿದ್ದ ಮನೆಗೆ ದಾಳಿ ನಡೆಸಿ ಉಗಾಂಡ ಮೂಲದ ನಾಲ್ವರು ಮಹಿಳೆಯರನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದ ಕ್ರಮಕ್ಕೆ ಬಹುತೇಕ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಆದರೆ, ಕಥಾಕಥಿತ ಸಭ್ಯ ಸಾಂಪ್ರದಾಯಿಕ ಮನೋಭಾವದವರಿರುವ ಪ್ರದೇಶಗಳಲ್ಲಿ ಇದೇ ರೀತಿಯ ನಡವಳಿಕೆ ಮುಂದುವರೆದರೆ ಅದು ವರ್ಣಬೇಧ ದೋರಣೆಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ದೂರು ನೀಡಿದ್ರೆ ಪೊಲೀಸರು ಸ್ಪಂದಿಸುತ್ತಿಲ್ಲ?: ಉಗಾಂಡ ಅಥವಾ ನೈಜೀರಿಯ ಮೂಲದ ಮಹಿಳೆಯರು ಅಕ್ರಮವಾಗಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿರುವುದರ ಜತೆಗೆ ವೇಶ್ಯಾವಾಟಿಕೆಯನ್ನೂ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ನೀಡಿದರೆ ಪೊಲೀಸರು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದ್ದರಿಂದ ಸತ್ಯಾಸತ್ಯತೆ ಪರಿಶೀಲಿಸಲು ಕಾನೂನು ಸಚಿವ ಸೋಮನಾಥ ಭಾರ್ತಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದುಬಂದಿದೆ.

ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲವೆಂದ ಪೊಲೀಸ್ ಅಧಿಕಾರಿ: ಬುಧವಾರ ರಾತ್ರಿ ನಡೆದ ಈ ಕಾರ್ಯಾಚರಣೆ ವೇಳೆ ಎಸಿಪಿ ಬಿ.ಎಸ್.ಜಕಾರ್ ಅವರಿಗೆ ಸೂಚನೆ ನೀಡಿದ್ದ ಸೋಮನಾಥ ಭಾರ್ತಿ, ಮಹಿಳೆಯರು ವಾಸವಿರುವ ಮನೆಗೆ ದಾಳಿ ನಡೆಸುವಂತೆ ಒತ್ತಾಯಿಸಿದ್ದರಾದರೂ, ಯಾವುದೇ ರೀತಿಯ ಬಂಧನ ಆದೇಶವಿಲ್ಲದ ಹೊರತಾಗಿ ಏಕಾಏಕಿ ಮಹಿಳೆಯರಿರುವ ಮನೆಗೆ ಅದೂ ರಾತ್ರಿ ವೇಳೆಯಲ್ಲಿ ನುಗ್ಗಿ ದಾಳಿ ನಡೆಸುವುದು ಕಾನೂನಿಗೆ ವಿರುದ್ಧವಾಗಿದ್ದು, ಇಂತಹಾ ಕ್ರಮಕ್ಕೆ ತಾನು ಮುಂದಾಗುವುದಿಲ್ಲವೆಂದು ಸುತರಾಂ ನಿರಾಕರಿಸಿದ್ದರು.

ನೈತಿಕ ಪೊಲೀಸ್ ಗಿರಿ?: ತದನಂತರ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಮತ್ತು ಸಚಿವ ಸೋಮನಾಥ ಭಾರ್ತಿ ಸೇರಿ ಉಗಾಂಡ ಮೂಲದ ಮಹಿಳೆಯರನ್ನು ಹೊರಕ್ಕೆಳೆದು, ಒಂದ್ವೇಳೆ ಮಾದಕ ದ್ರವ್ಯ ಸೇವಿಸಿರಬಹುದಾ ಎಂಬ ಶಂಕೆಯಿಂದ ಅವರನ್ನ ನೇರವಾಗಿ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದರು.

ಬಂಧನದ ವೇಳೆ ಮಹಿಳೆಯರನ್ನು ಶೌಚದ ಕೋಣೆಗೂ ತೆರಳಲು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಒಬ್ಬರು ಮಹಿಳೆಯನ್ನು ಸಾರ್ವಜನಿಕ ಪ್ರದೇಶದಲ್ಲೇ ಮೂತ್ರ ಮಾಡಲು ಒತ್ತಡ ಹೇರಲಾಯಿತೆಂಬ ಆರೋಪ ಕೇಳಿಬಂದಿದೆ.

ನಮ್ಮದು ಕೆಟ್ಟ ಬುದ್ದೀನಾ?: ಹಲವಾರು ವರ್ಷಗಳಿಂದ ಜಾತಿ, ಧರ್ಮ, ಲಿಂಗ, ವರ್ಣದ ಆಧಾರದಲ್ಲಿ ಎಸಗಲಾಗುವ ತಾರತಮ್ಯ ಧೋರಣೆಯನ್ನ ಮೈಗೂಡಿಸಿಕೊಂಡಿರುವ ಬಹುತೇಕ ಭಾರತೀಯರಲ್ಲಿ ನಿಷ್ಪಕ್ಷಪಾತ ನ್ಯಾಯ ಹುಡುಕುವುದು ತುಸು ತ್ರಾಸದಾಯಕ ಎಂಬ ಅಭಿಪ್ರಾಯಗಳು ಈ ಹಿಂದಿನಿಂದಲೂ ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದೀಗ ಅಕ್ರಮ ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಆರೋಪ ಹೊತ್ತಿರುವವರು ವಿಶೇಷವಾಗಿ ಕರಿಯ ಜನಾಂಗದವರೇ ಆಗಿರುವುದರಿಂದ ಪ್ರಕರಣ ವಿಭಿನ್ನ ತಿರುವು ಪಡೆದುಕೊಳ್ಳುವ ಸಾಧ್ಯತೆ ಕಂಡುಬಂದಿದ್ದು, ಬಿಳಿಯರಿಗೆ ಗೌರವ ನೀಡಿ ಕರಿಯರನ್ನು ಅವಮಾನಿಸುವ [ವರ್ಣಬೇಧ] ಮನೋಭಾವನೆ ಇಲ್ಲಿ ವ್ಯಕ್ತವಾಗಿದೆಯಾ ಎಂಬ ಗುಮಾನಿಯೂ ವ್ಯಕ್ತವಾಗಿದೆ.

ಕಾನೂನು ಸಚಿವರ ರಾತ್ರಿ ಕಾರ್ಯಾಚರಣೆಗೆ ಸಿಎಂ ಕೇಜ್ರಿವಾಲ್ ಸಮರ್ಥನೆ: ಈ ನಡುವೆ ದಾಳಿಗೆ ಅಸಹಕಾರ ವ್ಯಕ್ತಪಡಿಸಿದ್ದ ಪೊಲೀಸ್ ಅಧಿಕಾರಿಯನ್ನ ಅಮಾನತುಗೊಳಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್ ಪ್ರಾಧಿಕಾರವನ್ನು ತಮ್ಮ ಸರ್ಕಾರದ ಸುಪರ್ದಿಗೆ ನೇರವಾಗಿ ಒಳಪಡಿಸಲು ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.