FacebookTwitter

ಸಚಿವರ ಮಾತು ಕೇಳದ ದೆಹಲಿ ಪೊಲೀಸರ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ

    User Rating:  / 0
    PoorBest 

ನವದೆಹಲಿ(ಜ.20): ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೆಹಲಿ ಗದ್ದುಗೆ ಏರಿದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್`ಗೆ ಆಡಳಿತ ಸಿಬ್ಬಂದಿಯಿಂದ ತಾಪತ್ರಯ ಎದುರಾಗಿದೆ. ದೆಹಲಿಯ ಅನಿಷ್ಟಗಳನ್ನು ತೊಡೆದುಹಾಕುವ ಹುಮ್ಮಸ್ಸಿನಲ್ಲಿರುವ ಆಮ್ ಆದ್ಮಿಯ ಯುವ ಸಚಿವ ವೃಂದಕ್ಕೆ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ವೇಶ್ಯಾವಾಟಿಕೆಯೊಂದರ ರೇಡ್ ಮಾಡುವ ವಿಷಯದಲ್ಲಿ ಎಸಿಪಿಯೊಬ್ಬರು ಸಚಿವ ಸೋಮನಾಥ್ ಭಾರ್ತಿ ಮಾತನ್ನ ಕೇಳದೆ ಉದ್ಧಟತನ ಮೆರೆದಿದ್ದರು. ಜೊತೆಗೆ ಜನರ ಕಷ್ಟ ಕೇಳಲು ಬಂದ ಸಚಿವರಿಗೆ ನೀವು ನಿಮ್ಮ ಮಿತಿ ಮೀರುತ್ತಿದ್ದೀರಿ ಎಂದು ಅವಾಜ್ ಹಾಕಿದ್ದರು. ಅಷ್ಟೇ ಅಲ್ಲ, ಸಂಪುಟದ ಅತೀ ಕಿರಿಯ ಸಚಿವ ರಾಖಿ ಬಿರ್ಲಾ ಮಾತಿಗೂ ಪೊಲೀಸರು ಉಲ್ಟಾ ಹೊಡೆದಿದ್ದರು. ಅಷ್ಟೇ ಅಲ್ಲ, ದೆಹಲಿಯ ಹೃದಯ ಭಾಗದಲ್ಲಿ ಡ್ಯಾನಿಶ್ ಮಹಿಳೆ ಮೇಲಿನ ಅತ್ಯಾಚಾರ ತಡೆಯುವಲ್ಲಿಯೂ ದೆಹಲಿ ಪೊಲೀಸರು ವಿಫಲರಾಗಿದ್ದರು.

ಈ ಕುರಿತು ಸಿಎಂ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಶಿಂಧೆಯವರನ್ನು ಭೇಟಿಯಾಗಿ ತಪ್ಪಿತಸ್ಥ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಆದರೆ,ಕೇಂದ್ರ ಗೃಹ ಸಚಿವರು ಯಾವುದೇ ಕ್ರಮಕೈಗೊಳ್ಳದೆ  ಜಾಣ ಕುರುಡರಂತೆ ಸುಮ್ಮನಾಗಿದ್ದರು.  ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವಾಲಯದ ಎದುರು ಎಎಪಿ ಸಚಿವರು ಹಾಗೂ ಎಲ್ಲಾ ಶಾಸಕರು ಧರಣಿ ಹಮ್ಮಿಕೊಂಡಿದ್ದಾರೆ. ಇನ್ನೂ ಕೇಜ್ರಿವಾಲ್ ಪ್ರತಿಭಟನೆಯನ್ನು ಅತ್ತಿಕ್ಕಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಗೃಹಸಚಿವಾಲಯದ ಸುತ್ತಮುತ್ತ ಕರ್ಫೂ ವಿಧಿಸಲಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಕೇಜ್ರಿವಾಲ್ ಮನವಿ ಮಾಡಿರುವುದರಿಂದ ಜನರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ.

ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ದೆಹಲಿ ಪೊಲೀಸರು : ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಅಡಿಯಲ್ಲೇ ಬರುತ್ತದೆ. ಆದರೆ, ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ದೆಹಲಿಯ ಪೊಲೀಸ್ ಇಲಾಖೆ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿ ಬರುತ್ತದೆ. ಹೀಗಾಗಿ, ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಇದೇ ಇದೀಗ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಪೊಲೀಸರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.  

 

 

Add comment