FacebookTwitter

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

    User Rating:  / 0
    PoorBest 

ನವದೆಹಲಿ(ಜ.21): ಮಹತ್ವದ ಬೆಳವಣಿಗೆಯಲ್ಲಿ ಮರಣದಂಡನೆ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಕುರಿತು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಮರಣದಂಡನೆ ಶಿಕ್ಷೆಗೆ ಒಳಗಾದವರ ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಯಾಗಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಇದರನ್ವಯ ಮರಣದಂಡನೆಗೆ ಗುರಿಯಾಗಿದ್ದ 15 ಕೈದಿಗಳ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ.ಇದೇವೇಳೆ, ಮರಣದಂಡನೆಗೆ ಗುರಿಯಾದ ಕೈದಿಗಳ ಕ್ಷಮಾದಾನ ಅರ್ಜಿಗಳನ್ನ ವರ್ಷಗಟ್ಟಲೆ ವಿಳಂಬ ಮಾಡದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ವೀರಪ್ಪನ್ ಸಹಚರರಿಗೆ ಜೀವಾವಧಿ ಶಿಕ್ಷೆ: ನೆಲಬಾಂಬ್ ಸ್ಫೋಟಿಸಿ 22 ಜನರನ್ನ ಕೊಂದಿದ್ದ ವೀರಪ್ಪನ್ ಸಹಚರರಾದ ಜ್ಞಾನಪ್ರಕಾಶ್, ಸೈಮನ್, ಮೀಸೆಕಾರ್ ಮಾದಯ್ಯ, ಬಿಲವೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸದಾಶಿವಂ ಅವರ ನೇತೃತ್ವದ ಸುಪ್ರೀಕೋರ್ಟ್ ಪೀಠ ಈ ಮಹತ್ವದ ಆದೇಶ ನೀಡಿದೆ. ಹೀಗಾಗಿ, 2004ರಿಂದ ಜೈಲಿನಲ್ಲಿರುವ ಈ ನಾಲ್ವರೂ ವೀರಪ್ಪನ್ ಸಹಚರರ ಮರಣದಂಡನೆ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಪರಿವರ್ಲಿತಿಸಲಾಗಿದೆ. 

ಚಾಮರಾಜನಗರ ಅತ್ಯಾಚಾರ ಪ್ರಕರಣ ಅಪರಾಧಿಗಳಾದ ಶಿವು, ಜಡೆಸ್ವಾಮಿ ಮತ್ತು 4 ಕೊಲೆಗಳ ಅಪರಾಧಿ ಮಂಗಳೂರಿನ ಪ್ರವೀಣ್ ಕುಮಾರ್`ಗೂ ಮರಣದಂಡನೆ ಶಿಕ್ಷೆ  ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಯಾಗಿದೆ.

ಅಷ್ಟೇ ಅಲ್ಲ, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಂತಕರಾದ ಮುರುಗನ್, ಅರಿವು, ಸಂತನು ಕ್ಷಮಾದಾನ ಅರ್ಜಿ ವಿಲೇವಾರಿ ಕೂಡ ವಿಳಂಬವಾಗಿದ್ದು, ಅವರಿಗೂ ಈ ಆದೇಶ ಅನ್ವಯವಾಗಲಿದೆ.

ಜೀವಾವಧಿ ಶಿಕ್ಷೆ ಎಂದರೆ ಜೀವನಪರ್ಯಂತ ಜೈಲು: ಇದೇವೇಳೆ, ಜೀವಾವಧಿ ಶಿಕ್ಷೆ ಎಂದರೆ 16 ಅಥವಾ 20 ವರ್ಷ ಜೈಲು ಶಿಕ್ಷೆ ಅಲ್ಲ. ಜೀವನಪರ್ಯಂತ ಜೈಲಿನಲ್ಲಿ ಕಳೆಯಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. 

 

 

 

 

Add comment