FacebookTwitter

ಇಬ್ಬರೂ ಒಪ್ಪಿ ಸೆಕ್ಸ್ ಮಾಡಿದ್ರೆ ರೇಪ್ ಅನ್ನೋಕಾಗಲ್ಲ

    User Rating:  / 1
    PoorBest 

ನವದೆಹಲಿ(ಮೇ 21): ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಸಮ್ಮತಿಯಿಂದಲೇ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದನ್ನ ಅತ್ಯಾಚಾರವೆಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದರ ವಿಚಾರಣೆ ನಂತರ ತೀರ್ಪು ನೀಡುವ ವೇಳೆ ಸರ್ವೋಚ್ಚ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯಪಟ್ಟಿದೆ... ತನ್ನನ್ನು ಮದುವೆಯಾಗುವ ಭರವಸೆ ನೀಡಿ ಸೆಕ್ಸ್ ಮಾಡಿ ನಂತರ ಕೈಕೊಟ್ಟನೆಂದು ಯುವತಿಯೊಬ್ಬಳು ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯಗಳು ನೀಡಿದ ಶಿಕ್ಷೆಯನ್ನ ಸುಪ್ರೀಂಕೋರ್ಟ್ ರದ್ದುಗೊಳಿಸಿ ಹೊಸ ತೀರ್ಪು ನೀಡಿದೆ...

ಮದುವೆಯಾಗುವ ಉದ್ದೇಶದಿಂದ ಹುಡುಗಿಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಲಾಗಿದೆಯೇ? ಅಥವಾ ಮದುವೆಯಾಗುವ ಉದ್ದೇಶವಿಲ್ಲದಿದ್ದರೂ ಕಪಟತನದಿಂದ ಸೆಕ್ಸ್ ಮಾಡಲಾಗಿದೆಯೇ? ಅಥವಾ ತನ್ನ ತೀಟೆ ತೀರಿಸಿಕೊಳ್ಳಲು ಸುಳ್ಳು ಭರವಸೆ ನೀಡಲಾಗಿತ್ತೇ? ಈ ಅಂಶಗಳನ್ನ ನ್ಯಾಯಾಲಯ ಸೂಕ್ಷ್ಮವಾಗಿ ಪರಿಗಣಿಸಿ ರೇಪ್ ಹಾಗೂ ಸಮ್ಮತಿಯ ಸೆಕ್ಸ್ ನಡುವೆ ಸ್ಪಷ್ಟ ವ್ಯತ್ಯಾಸವಿರುವುದನ್ನ ಗುರುತಿಸಿದೆ...

ಅಕ್ಷಮ್ಯ ಅಪರಾಧ
"ನೈತಿಕವಾಗಿ ಮತ್ತು ದೈಹಿಕವಾಗಿ ಅತ್ಯಾಚಾರವೆಂಬುದು ಒಂದು ಅಕ್ಷಮ್ಯ ಅಪರಾಧವಾಗಿದೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ದೇಹ, ಮನಸು ಮತ್ತು ಖಾಸಗಿತನದ ಮೇಲೆ ನಡೆದ ಹಲ್ಲೆಯಾಗಿದೆ. ಕೊಲೆಗಾರ ಒಬ್ಬ ವ್ಯಕ್ತಿಯ ದೇಹವನ್ನ ನಾಶ ಮಾಡುತ್ತಾನೆ. ಆದರೆ, ರೇಪಿಸ್ಟ್ ವೊಬ್ಬ ಅಸಹಾಯಕ ಹೆಣ್ಣಿನ ಮಾನಸಿಕತೆಯನ್ನೇ ಘಾಸಿಗೊಳಿಸುತ್ತಾನೆ" ಎಂದು ಸುಪ್ರೀಂಕೋರ್ಟ್ ಗುಡುಗಿದೆ...

ಹೆಣ್ಣನ್ನು ಪ್ರಾಣಿಯ ಮಟ್ಟಕ್ಕೆ ಇಳಿಸುತ್ತಾರೆ
"ಅತ್ಯಾಚಾರಕ್ಕೊಳಗಾದ ಮಹಿಳೆಗೆ ತನ್ನ ಜೀವನದ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗುತ್ತದೆ. ಆ ಹೆಣ್ಣು ಕೇವಲ ಪ್ರಾಣಿಯಷ್ಟೇ ಎಂಬಂತಾಗಿಬಿಡುತ್ತಾಳೆ. ಹೀಗಾಗಿ, ಅತ್ಯಾಚಾರ ಪ್ರಕರಣವನ್ನ ಬೇರೆ ರೀತಿಯ ದೌರ್ಜನ್ಯ ಪ್ರಕರಣಗಳ ಮಟ್ಟಕ್ಕೆ ಇಳಿಸಲಾಗುವುದಿಲ್ಲ. ಅತ್ಯಾಚಾರಿಯೊಬ್ಬ ಕೇವಲ ಹೆಣ್ಣಿನ ಮೇಲಷ್ಟೇ ಅಲ್ಲ ಇಡೀ ಸಮಾಜದ ಮೇಲೆಯೇ ದೌರ್ಜನ್ಯ ಎಸಗುತ್ತಾನೆ"

"ಅತ್ಯಾಚಾರವು ಹೆಣ್ಣಿನ ಗೌರವಕ್ಕೆ ಸಂಪೂರ್ಣ ಮಸಿ ಬಳಿಯುತ್ತದೆ. ಹೆಣ್ಣಿನ ಘನತೆಯನ್ನ ಹಿಂಡಿಹಾಕುತ್ತದೆ. ಶಾರೀರಿಕ ಮತ್ತು ಮಾನಸಿಕವಾಗಿ ಘಾಸಿ ಮಾಡುತ್ತದೆ" ಎಂದು ನ್ಯಾಯಾಲಯ ವಿಷಾದಿಸಿದೆ....

ಆರೋಪಿ ಖುಲಾಸೆ
ಮೊದಲೇ ಹೇಳಿದಂತೆ ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಗೆ ಹರಿಯಾಣದ ಕೆಳ ನ್ಯಾಯಾಲಯವೊಂದು ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಪಂಜಾಬ್ ಮತ್ತು ಹರಿಯಾಣದ ಉಚ್ಚನ್ಯಾಯಾಲಯಗಳೂ ಕೂಡ ಈ ಶಿಕ್ಷೆಯನ್ನ ಎತ್ತಿಹಿಡಿದಿದ್ದವು. ಆದರೆ, ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ವಿಭಿನ್ನವಾಗಿ ಯೋಚಿಸಿ, ರೇಪ್ ಮತ್ತು ಸಮ್ಮತಿಯ ಸಕ್ಸ್ ನಡುವಿನ ವ್ಯತ್ಯಾಸ ಗುರುತಿಸಿ, ಆರೋಪಿಯನ್ನ ಶಿಕ್ಷೆಯಿಂದ ಖುಲಾಸೆಗೊಳಿಸಿದೆ...

ದೂರುದಾರಳಾದ ಹುಡುಗಿಯು ತಾನು ಆರೋಪಿಯೊಂದಿಗೆ ಸಮ್ಮತಿಯಿಂದಲೇ ಸೆಕ್ಸ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು. ಆದರೆ, ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದ ದೈಹಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದೆ ಎಂದು ಆರೋಪಿಸಿದ್ದಳು. ಆಗ, ಆಕೆ 19ರ ಪ್ರಾಯದವಳಾಗಿದ್ದಳಂತೆ. ಪ್ರಾಪ್ತ ವಯಸ್ಕಳಾಗಿದ್ದರಿಂದ ಒಳಿತು-ಕೆಡುಕು ಅರಿವಿದ್ದಿರಬೇಕು. ಹೀಗಾಗಿ, ಆರೋಪಿಯ ಕೃತ್ಯವನ್ನ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಸುಪ್ರೀಂಕೋರ್ಟ್ ಅಭಿಮತವಾಗಿದೆ....

 

 

 

Add comment