FacebookTwitter

ಈಜು ಬಾರದಿದ್ದರೂ 60 ಗಂಟೆ ಸಮುದ್ರದಲ್ಲಿದ್ದು ಬದುಕಿ ಬಂದ ಭೂಪ..!

    User Rating:  / 0
    PoorBest 

 

ತೈವಾನ್(ಜ.10): ಆಯಸ್ಸು ಗಟ್ಟಿ ಇದ್ದರೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ಸಾಯಲ್ಲ ಅಂತಾರಲ್ಲ. ಈ ಮಾತಿಗೆ ಅನ್ವರ್ಥ ಎಂಬುವಂಥಾ ಘಟನೆಯೊಂದು ತೈವಾನ್ ದೇಶದಲ್ಲಿ ನಡೆದಿದೆ. ಸಮುದ್ರದ ಅಲೆಗೆ ಸಿಕ್ಕಿ ಕೊಚ್ಚಿಹೋಗಿದ್ದ ಈಜು ಬಾರದ ವ್ಯಕ್ತಿಯೊಬ್ಬ 60 ಗಂಟೆಗಳ ಬಳಿಕ ಬದುಕಿ ಬಂದ ಪವಾಡ ತೈವಾನ್`ನ ದೇಶದ ಹುಲೀನ್ ಕಡಲ ಕಿನಾರೆಯಲ್ಲಿ ನಡೆದಿದೆ.

ಮೂಲತಃ ಮೀನುಗಾರನಾಗಿರುವ ಸೆಂಗ್ ಲೀನ್ ಫಾ ಎಂಬಾತ ಎಂದಿನಂತೆ ಅವತ್ತು ಮೀನುಗಾರಿಕೆಗೆ ತೆರಳಿದ್ದ. ಸಮುದ್ರ ತೀರದಲ್ಲಿ ನಿಂತಿದ್ದ ಸೆಂಗ್`ನನ್ನು ಬೃಹತ್ ಗಾತ್ರದ ಅಲೆಯೊಂದು ಸೆಳೆದುಕೊಂಡು ತನ್ನೊಡಲಿಗೆ ಎಳೆದೊಯ್ದಿತ್ತು. ನಡುನೀರಿನಲ್ಲಿದ್ದವನಿಗೆ ಒಂದು ಹುಲ್ಲು ಕಡ್ಡಿಯ ಆಸರೆ ಸಿಕ್ಕರೂ ಸಾಕು ಎನ್ನುವ ರೀತಿ ಸೆಂಗ್`ಗೆ ಸಮುದ್ರದಲ್ಲಿ ತೇಲುತ್ತಿದ್ದ ಒಂದು ಮರದ ತುಂಡು ಸಿಗುತ್ತೆ. ಬದುಕಬೇಕೆಂಬ ಛಲದಿಂದ ಆ ಮರದ ತುಂಡನ್ನೇ ಗಟ್ಟಿಯಾಗಿ ತಬ್ಬಿ ಹಿಡಿದ ಸೆಂಗ್, ಎಂತಹ ಬೃಹತ್ ಗಾತ್ರದ ಅಲೆ ಬಂದರೂ ಸರಿ ಆ ತುಂಡು ಸಮುದ್ರ ತೀರಕ್ಕೆ ತೇಲಿಕೊಂಡು ಬರುವವರೆಗೂ ಮರದ ತುಂಡನ್ನ ಬಿಡದೇ ತಬ್ಬಿ ಹಿಡಿಯುತ್ತಾನೆ.

ಹೀಗೆ, 60 ಗಂಟೆಗಳ ಕಾಲ ಮರದ ತುಂಡನ್ನ ತಬ್ಬಿ ಹಿಡಿದ ಸೆಂಗ್`ನನ್ನ ಆ ಮರದ ತುಂಡು ದಡ ಸೇರಿಸುತ್ತೆ. ಸಮುದ್ರದ ಅಲೆಗೆ ಸಿಲುಕಿ ಸತ್ತೇ ಎಂದುಕೊಂಡಿದ್ದ ಸೆಂಗ್, ಪವಾಡಸದೃಶ ರೀತಿ ಬದುಕುಳಿದಿದ್ದಾನೆ.

ಸೆಂಗ್ ಹೇಳಿದ್ದು.. ಮೀನು ಹಿಡಿಯಲು ತೆರಳಿದ್ದಾಗ ಬೃಹತ್ ಅಲೆಯೊಂದು ನನ್ನನ್ನು ಸೆಳೆದುಕೊಂಡು ಹೋಯಿತು. ಬಳಿಕ
ನೀರಿನಲ್ಲಿ ಸಿಕ್ಕ ಮರದ ತುಂಡನ್ನ ಬಿಡದೇ ತಬ್ಬಿ ಹಿಡಿದೆ. ಹಲವು ಗಂಟೆಗಳ ಬಳಿಕ ಆ ತುಂಡು 70 ಕಿ.ಮೀ ದೂರದ ಟೈಟುಂಗ್ ಸಮುದ್ರ ತೀರಕ್ಕೆ ಬಂದಿತ್ತು. ದೂರದಲ್ಲಿ ವಿದ್ಯುತ್ ದೀಪಗಳು ಮತ್ತು ನನ್ನ ಕಾಲಿಗೆ ಮರಳಿನ ಸ್ಪರ್ಶವಾಗುತ್ತಿದ್ದಂತೆ ನಾನು ದಡದ ಹತ್ತಿರದಲ್ಲಿರುವುದು ತಿಳಿಯಿತು. ನೀರನ್ನ ತಳ್ಳುವ ಮೂಲಕ ಮರದ ತುಂಡನ್ನ ದಡದತ್ತ ಬರುವಂತೆ ಮಾಡಿದೆ, ಕೊನೆಗೂ ನನ್ನ ಜೀವ ಉಳಿಸಿಕೊಂಡೆ'

60 ಗಂಟೆ ಅನ್ನ, ಆಹಾರವಿಲ್ಲದೇ ನೀರಿನಲ್ಲಿ ಕಳೆದ ಸೆಂಗ್ ದೇಹ ನಿರ್ಜಲೀಕರಣಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಬದುಕಬೇಕೆಂಬ ಛಲದಿಂದ ಮರದ ತುಂಡನ್ನ ತಬ್ಬ ಹಿಡಿದ ಸೆಂಗ್ ಆತ್ ಸ್ಥೈರ್ಯ ಸೆಂಗ್`ಗೆ ಮರುಜೀವ ನೀಡಿದೆ.

 

 

 

Add comment




 

More items in this section