FacebookTwitter

ಪೋಲಿಯೋ ನಿರ್ಮೂಲನೆ ಹೇಗೆಂದು ಭಾರತವನ್ನು ನೋಡಿ ಕಲಿಯಿರಿ-ಪಾಕ್ ಮಾಧ್ಯಮಗಳ ವರದಿ

    User Rating:  / 0
    PoorBest 

ಇಸ್ಲಾಮಾಬಾದ್(ಜ.16): ಮನುಷ್ಯನನ್ನು ಶಾಶ್ವತ ಅಂಗವಿಕಲನನ್ನಾಗಿ ಮಾಡುವ ಭೀಕರ ಪೋಲಿಯೋ ರೋಗದಿಂದ ಭಾರತ ಮುಕ್ತಿ ಪಡೆದಿದೆ. ಇತ್ತೀಚೆಗೆ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ನಿರಂತರ ಶ್ರಮ ಮತ್ತು ಬದ್ಧತೆಯಿಂದಾಗಿ ಭಾರತ ಮಾರಕ ರೋಗಕ್ಕೆ ಸೆಡ್ಡು ಹೊಡೆದಿದೆ. ಇದು ವಿಶ್ವದ ಹಲವು ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಭಾರತದ ಸಾಧನೆಯನ್ನ ಹಾಡಿ ಹೊಗಳಿವೆ. ಅಷ್ಟೇ ಅಲ್ಲ, ಪೊಲೀಯೋ ನಿರ್ಮೂಲನೆ ಬಗ್ಗೆ ಭಾರತವನ್ನು ನೋಡಿ ಕಲಿಯುವಂತೆ ಪಾಕಿಸ್ತಾನ ಸರ್ಕಾರಕ್ಕೆ ಬುದ್ಧಿ ಹೇಳಿವೆ.

`ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಂಘ ಸಂಸ್ಥೆಗಳು, ವಿಶ್ವಸಂಸ್ಥೆ ಸಹಾಯದೊಂದಿಗೆ ಭಾರತ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಈ ಸಾಧನೆ ಮಾಡಿದೆ. ನಗರ, ಹಳ್ಳಿಗಳು,ಕೊಳಚೆ ಪ್ರದೇಶಗಳು, ನಿಲ್ದಾಣಗಳು ಹೀಗೆ ದೇಶದ ಮೂಲೆ ಮೂಲೆಯಲ್ಲೂ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಸಿ ಎಲ್ಲ ವರ್ಗದ ಮಕ್ಕಳಿಗೂ ಲಸಿಕೆಯನ್ನ ತಲುಪಿಸಲಾಗಿದೆ. ಹೀಗಾಗಿ, ಪೊಲೀಯೋ ರೋಗ ಭಾರತದಲ್ಲಿ ನಿರ್ಮೂಲನೆಗೊಂಡಿದೆ. ಪಾಕಿಸ್ತಾನ ಸಹ ಪೋಲಿಯೋ ರೋಗದಿಂದ ತತ್ತರಿಸುತ್ತಿದೆ. ಭಾರತದಿಂದ ನಾವು ಬಹುಮುಖ್ಯ ಪಾಠ ಕಲಿಯಬೇಕಿದೆ ಎಂದು `ದಿ ನೇಶನ್' ದಿನಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ಈಗಲಾದರೂ ನಮ್ಮ ದೇಶ ಪೋಲಿಯೋ ನಿರ್ಮೂಲನೆಯನ್ನ ಗಂಭೀರವಾಗಿ ಪರಿಗಣಿಸಿ ಬದ್ಧತೆ ಪ್ರದರ್ಶಿಸಬೇಕಿದೆ. ರೋಗ ನಿರ್ಮೂಲನೆಗೆ ಚುಚ್ಚುಮದ್ದು ಕಾರ್ಯಕ್ರಮ ಆರಂಭಿಸಬೇಕಿದೆ. ತಮ್ಮ ಧಾರ್ಮಿಕ ಮೂಢನಂಬಿಕೆ ಮೂಲಕ ಪೋಲಿಯೋ ಕಾರ್ಯಕ್ರಮವನ್ನ ವಿರೋಧಿಸುತ್ತಿರುವ ತಮ್ಮ ಧಾರ್ಮಿಕ ಮುಖಂಡರು ಅನಿಷ್ಟ ನಂಬಿಕೆಗಳನ್ನ ಬದಿಗಿಟ್ಟು ಮಾರಕ ರೋಗವನ್ನ ತೊಡೆದುಹಾಕುವತ್ತ ಮುಂದಾಗಬೇಕಿದೆ.

ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪೋಲಿಯೋ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2012ರಲ್ಲಿ 58 ಪ್ರಕರಣಗಳು ಪತ್ತೆಯಾಗಿದ್ದರೆ, 2013ರಲ್ಲಿ 83 ಪ್ರಕರಣಗಳು ಪತ್ತೆಯಾಗಿವೆ. ಪಾಕಿಸ್ತಾನದಲ್ಲಿ ಪೊಲಿಯೋ ಕೇವಲ ಒಂದು ಆರೋಗ್ಯದ ವಿಷಯವಲ್ಲ. ಇದು ನಮ್ಮ ಜನರ ಅಸಹಾಯಕತೆಯ ಪ್ರತೀಕ. ನಮ್ಮ ರಾಜಕಾರಣಿಗಳು ಬದ್ಧತೆ ಪ್ರದರ್ಶಿಸದಿದ್ದಲ್ಲಿ ಪೋಲಿಯೋ ಮತ್ತಷ್ಟು ವಿರಾಟ್ ರೂಪದಲ್ಲಿ ಬೆಳೆಯಲಿದ್ದು, ನಮ್ಮ ಮಕ್ಕಳು ರೋಗಕ್ಕೆ ತುತ್ತಾಗಲಿದ್ದಾರೆ' ಎಂದು ದಿ ನೇಶನ್ ಒತ್ತಿ ಹೇಳಿದೆ.

 

 

 

Add comment
 

More items in this section