ಮಹಿಳೆಯ ಮೊಣಕಾಲಿನಲ್ಲಿ 100 ಬಂಗಾರದ ಸೂಜಿಗಳು ಪತ್ತೆ - ಎಕ್ಸ್ ರೇ ತೆಗೆದ ವೈದ್ಯರಿಗೆ ಶಾಕ್

ಬೋಸ್ಟನ್(ಜ.17): ಹೌದು, ನಂಬಿದರೆ ನಂಬಿ ಬಿಟ್ಟರೆ ಬಿಡಿ. ದಕ್ಷಿಣ ಕೊರಿಯಾದ ಮಹಿಳೆಯೊಬ್ಬಳ ಮೊಣಕಾಲಿನಲ್ಲಿ ಬರೋಬ್ಬರಿ 100 ಬಂಗಾರದ ಸೂಜಿಗಳು ಪತ್ತೆಯಾಗಿವೆ. ಎಕ್ಸ್ ರೇ ತೆಗೆದು ಪರೀಕ್ಷೆ ನಡೆಸಿದ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ವೈದ್ಯರು ಅಕ್ಷರಶಃ ದಂಗಾಗಿದ್ದಾರೆ. ಅಂದಹಾಗೆ, ಈ ಮಹಿಳೆಯ ಮೊಣಕಾಲಿನಲ್ಲಿ ಸೂಜಿಗಳು ಹೇಗೆ ಬಂದವು ಎಂದು ಹುಡುಕುತ್ತಾ ಹೊರಟಾಗ ಸಿಕ್ಕ ಉತ್ತರ ಆಕೆ ಈ ಹಿಂದೆ ಪಡೆದಿದ್ದ ಚಿಕಿತ್ಸೆ.

ಹೌದು, ತೀವ್ರ ಮೊಣಕಾಲು ನೋವು, ಸಂಧಿವಾತದಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ನೋವು ನಿವಾರಕ ಮಾತ್ರೆ, ಚಿಕಿತ್ಸೆಗಳನ್ನ ಪಡೆದಿದ್ದರಂತೆ. ಆದರೆ ಅದರಿಂದ ಯಾವುದೇ ಗುಣ ಕಾಣದೆ ಹೊಟ್ಟೆ ಸಮಸ್ಯೆ ಕಾಡಲಾರಂಭಿಸಿತ್ತಂತೆ. ಹೀಗಾಗಿ, ಆ ಮಹಿಳೆ ಅಕ್ಯುಪಂಕ್ಚರ್ ಚಿಕಿತ್ಸೆಯ ಮೊರೆ ಹೋಗಿದ್ದರಂತೆ. ಸಾಮಾನ್ಯವಾಗಿ ಅಕ್ಯುಪಂಕ್ಚರ್`ನಲ್ಲಿ ಸೂಜಿಯಿಂದ ದೇಹದ ಭಾಗಕ್ಕೆ ಚುಚ್ಚಿ ಚಿಕಿತ್ಸೆ ಕೊಡಲಾಗುತ್ತೆ. ಆ ಸಂದರ್ಭದಲ್ಲಿ ನೋವು ನಿವಾರಣೆಯ ಶಾಶ್ವತ ಉತ್ತೇಜನಕ್ಕಾಗಿ ಅಕ್ಯುಪಂಕ್ಚರ್ ಚಿಕಿತ್ಸಕರು ಬಂಗಾರದ ಸೂಜಿಗಳನ್ನ ಮೊಣಕಾಲಿನಲ್ಲಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಚಿಕಿತ್ಸೆಯಿಂದ ಮಹಿಳೆಯ ಮೊಣಕಾಲಿನ ನೋವೇನೋ ಕಡಿಮೆಯಾಗಿತ್ತು. ಆದರೆ, ಮೊಣಕಾಲಿನ ಊತ, ಸೋಂಕು ಮತ್ತು ಹುಣ್ಣಿನ ಸಮಸ್ಯೆ ಕಾಡಲಾರಂಭಿಸಿತ್ತು. ಹೀಗಾಗಿ, ಕೊರಿಯಾ ಮಹಿಳೆ ಬೋಸ್ಟನ್ ವಿಶ್ವವಿದ್ಯಾಲಯದ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದಾಗ ಎಕ್ಸ್ ರೇಯಲ್ಲಿ ಮೊಣಕಾಲಿನಲ್ಲಿ ಬಂಗಾರದ ಸೂಜಿಗಳಿರುವುದು ಪತ್ತೆಯಾಗಿದೆ.