FacebookTwitter

ದಿಲ್ಲಿಯಲ್ಲಿ ಬಿನ್ನಿ, ನಾಯರ್ ಅಬ್ಬರ; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ನವದೆಹಲಿ(ಡಿ.31): ಈ ರಣಜಿ ಋತುವಿನಲ್ಲಿ ಕರ್ನಾಟಕದ ಭರ್ಜರಿ ಪ್ರದರ್ಶನ ದೆಹಲಿಯ ವಿರುದ್ಧವೂ ಮುಂದುವರಿದಿದೆ. ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ದೆಹಲಿ ಎದುರು ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ದೆಹಲಿಯ 202 ರನ್ನುಗಳ ಮೊದಲ ಇನಿಂಗ್ಸ್'ಗೆ ಪ್ರತಿಯಾಗಿ ಕರ್ನಾಟಕ 2ನೇ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 226 ರನ್ ಪೇರಿಸಿತ್ತು. ಸ್ಟುವರ್ಟ್ ಬಿನ್ನಿ ಮತ್ತು ಕರುಣ್ ನಾಯರ್ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿ ಕೊರೆಯುವ ಚಳಿಯಲ್ಲೂ ಆತಿಥೇಯ ದೆಹಲಿ ಬೌಲರುಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ, ನಾಕೌಟ್ ಹಂತ ತಲುಪುವ ದೆಹಲಿ ಆಸೆಗೆ ಕನ್ನಡಿಗರು ತಣ್ಣೀರೆರಚಿದರು...

ವಿಕೆಟ್ ನಷ್ಟವಿಲ್ಲದೇ 2 ರನ್ನುಗಳೊಂದಿಗೆ 2ನೇ ದಿನದಾಟ ಶುರು ಮಾಡಿದ ಕರ್ನಾಟಕ 73 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆದರೆ, ಕರುಣ್ ನಾಯರ್ ಮತ್ತು ಸ್ಟುವರ್ಟ್ ಬಿನ್ನಿ 5ನೇ ವಿಕೆಟ್'ಗೆ 127 ರನ್ ಸೇರಿಸಿ ತಂಡದ ಮಾನವನ್ನ ಕಾಪಾಡಿದ್ದುದ್ದಲ್ಲದೇ ಇನಿಂಗ್ಸ್ ಮುನ್ನಡೆಗೂ ಕಾರಣರಾದರು.

ಕರುಣ್ ನಾಯರ್ ಹೆಬ್ಬಂಡೆಯಂತೆ ನಿಂತರೆ, ಬಿನ್ನಿ ಬಿಡುಬೀಸಾಗಿ ಬ್ಯಾಟ್ ಬೀಸಿದರು. ಟೀಮ್ ಇಂಡಿಯಾಗೆ ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್'ನಲ್ಲಿ ಅಬ್ಬರಿಸಿದ ಸ್ಟುವರ್ಟ್ ಬಿನ್ನಿ 88 ರನ್ ಗಳಿಸಿ ನಿರ್ಗಮಿಸಿದರು. ಅವರ ಇನಿಂಗ್ಸಲ್ಲಿ 6 ಸಿಕ್ಸರ್ ಒಳಗೊಂಡಿದ್ದವು...

ದಿನಾಂತ್ಯದಲ್ಲಿ ಶತಕ ಸಮೀಪ ಬಂದ ಕರುಣ್ ನಾಯರ್ 92 ರನ್ ಗಳಿಸಿ ಕ್ರೀಸ್'ನಲ್ಲಿದ್ದಾರೆ. ಆಲ್ರೌಂಡರ್ ಶ್ರೇಯಸ್ ಗೋಪಾಲ್ ಜೊತೆಯಲ್ಲಿ ಸಾಥ್ ನೀಡಿದ್ದಾರೆ...

ಇನ್ನು, ಎ ಗುಂಪಿನಲ್ಲಿ ಕರ್ನಾಟಕ ಮತ್ತು ಗುಜರಾತ್ ತಂಡಗಳು ಎಂಟರ ಹಂತ ತಲುಪುವುದು ಖಚಿತವಾಗಿದೆ... ದೆಹಲಿ ಈ ಪಂದ್ಯವನ್ನ ಜಯಿಸಿದರೆ ಮಾತ್ರ ನಾಕೌಟ್ ಪ್ರವೇಶ ಸಾಧ್ಯ. ಇಲ್ಲದಿದ್ದರೆ, ಮುಂಬೈ ಮತ್ತು ಪಂಜಾಬ್ ತಂಡಗಳು ಕ್ವಾರ್ಟರ್ ಫೈನಲ್'ಗೆ ಏರಲಿವೆ...



ಸ್ಕೋರು ವಿವರ(2ನೇ ದಿನಾಂತ್ಯಕ್ಕೆ)
ದೆಹಲಿ ಮೊದಲ ಇನಿಂಗ್ಸ್ 202 ಆಲೌಟ್
ಕರ್ನಾಟಕ ಮೊದಲ ಇನಿಂಗ್ಸ್ 72 ಓವರ್ 226/5
(ಕರುಣ್ ನಾಯರ್ ಅಜೇಯ 92, ಸ್ಟುವರ್ಟ್ ಬಿನ್ನಿ 88 ರನ್ - ಆಶೀಶ್ ನೆಹ್ರಾ 33/2, ವರುಣ್ ಸೂದ್ 75/2)

 

 

 

Add comment




 

More items in this section