FacebookTwitter

ಧೋನಿಪಡೆಯನ್ನ 10 ವಿಕೆಟಿಂದ ಕಟ್ಟಿಹಾಕಿದ ಹರಿಣಗಳು

ಡರ್ಬನ್(ಡಿ.31): ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತೀಯರ ಕನಸು ಕನಸಾಗಿಯೇ ಉಳಿದುಕೊಂಡಿದೆ. ನಿನ್ನೆ ಮುಕ್ತಾಯಗೊಂಡ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 10 ವಿಕೆಟುಗಳಿಂದ ಗೆಲುವು ಪಡೆದಿದೆ. ಈ ಮೂಲಕ ವಿಶ್ವದ ಸರ್ವಶ್ರೇಷ್ಠ ಆಲ್'ರೌಂಡರ್ ಜಾಕ್ ಕಾಲಿಸ್ ನಿವೃತ್ತಿಗೆ ಹರಿಣಗಳು ಗೆಲುವಿನ ಗಿಫ್ಟ್ ನೀಡಿದ್ದಾರೆ... ಹಾಗೆಯೇ, ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯನ್ನ ಸೌಥ್ ಆಫ್ರಿಕಾ 1-0ಯಿಂದ ವಶಪಡಿಸಿಕೊಂಡಿದೆ.

ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್'ನಲ್ಲಿ 68 ರನ್'ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತೀಯರು, 5ನೇ ದಿನ ಮ್ಯಾಚ್ ಉಳಿಸಿಕೊಳ್ಳಲು ಸಾಕಷ್ಟು ಹರಸಾಹಮ ಮಾಡಿದರು. ಕೊನೆಯ ದಿನ ಭಾರತೀಯ ಬ್ಯಾಟುಗಾರರು ರನ್ ಗಳಿಸಲು ಅಕ್ಷರಶಃ ಪರದಾಡಿದರು. ಆಫ್ರಿಕನ್ ಬೌಲರ್'ಗಳ ಮುಂದೆ ಧೋನಿ ಹುಡುಗರು ಮಂಕಾದ್ರು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋದರು. ಹೀಗಾಗಿ, 223 ರನ್ನಿಗೆ ಆಲೌಟ್ ಆಯಿತು. ಗೆಲ್ಲಲು 58 ರನ್ನುಗಳ ಸುಲಭ ಗುರಿ ಪಡೆದ ಆತಿಥೇಯರು ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಪಡೆದು ಬೀಗಿದರು.

ಗಮನ ಸೆಳೆದ ರಹಾನೆ
ಭಾರತದ ಪಾಲಿಗೆ ಒಂದೇ ಸಮಾಧಾನವೆಂದರೆ ಅಜಿಂಕ್ಯ ರಹಾನೆಯವರ ಬ್ಯಾಟಿಂಗ್. ಎಲ್ಲಾ ಆಟಗಾರರು ವಿಫಲವಾದರೂ ಅಜಿಂಕ್ಯ ರಹಾನೆ ಹೆಬ್ಬಂಡೆಯಂತೆ ನಿಂತು ತಂಡವನ್ನ ಅಪಾಯದಿಂದ ಪಾರು ಮಾಡಲು ಯತ್ನಿಸಿದರು. ಆದರೆ, ದುರದೃಷ್ಟಕ್ಕೆ 4 ರನ್ನುಗಳಿಂದ ಶತಕ ವಂಚಿತರಾದರು. ಇದೇ ಪಂದ್ಯದ ಮೊದಲ ಇನಿಂಗ್ಸಲ್ಲಿ ಮುರಳಿ ವಿಜಯ್ 97 ರನ್ ಗಳಿಸಿದ್ದೂ ಕೂಡ ಗಮನಾರ್ಹವೇ...

ಇದು ಬಿಟ್ಟರೆ, ಭಾರತಕ್ಕೆ ಸ್ವಲ್ಪ ಸಮಾಧಾನ ತಂದವರು ರವೀಂದ್ರ ಜಡೇಜಾ... ಮೊದಲ ಇನಿಂಗ್ಸಲ್ಲಿ ದಕ್ಷಿಣ ಆಫ್ರಿಕಾವನ್ನ ಕಟ್ಟಿಹಾಕಲು ಇವರ ಪಾತ್ರ ಪ್ರಮುಖವಾಗಿತ್ತು. ಬರೋಬ್ಬರಿ 58 ಓವರ್ ಬೌಲ್ ಮಾಡಿದ ಜಡೇಜಾ 138 ರನ್ನಿತ್ತು ಹರಿಣಗಳ 6 ವಿಕೆಟ್ ಕಬಳಿಸಿದ್ದರು...

ಇನ್ನು, ಈ ಪಂದ್ಯದಲ್ಲಿ 9 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಲ್ಲದೇ, ಟೆಸ್ಟ್ ಕ್ರಿಕೆಟ್'ನಲ್ಲಿ 350 ವಿಕೆಟ್ ಮೈಲಿಗಲ್ಲನ್ನೂ ಮುಟ್ಟಿದರು. ಎರಡೂ ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್'ಸಿಬಿ ಹುಡುಗ ಎಬಿ ಡೀವಿಲಿಯರ್ಸ್ ಸರಣಿ ಶ್ರೇಷ್ಠ ಗೌರವವಕ್ಕೆ ಬಾಜನರಾದರು.

ಮುಂದಿದೆ ಕಿವೀಸ್ ಸವಾಲು
ಸೋಲಿನೊಂದಿಗೆ 2013ರ ವರ್ಷವನ್ನ ಅಂತ್ಯಗೊಳಿಸಿರುವ ಟೀಮ್ ಇಂಡಿಯಾ 2014ರ ವರ್ಷದಲ್ಲಿ ನ್ಯೂಜಿಲೆಂಡ್ ಪ್ರವಾಸದ ಮೂಲಕ ಕ್ರಿಕೆಟ್ ಯಾತ್ರೆ ಆರಂಭಿಸಲಿದೆ. ಜನವರಿ 19ರಿಂದ ಫೆಬ್ರವರಿ 18ರವರೆಗೆ ಐದು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾದಂತೆ ನ್ಯೂಜಿಲೆಂಡ್'ನಲ್ಲಿರುವ ಪಿಚ್'ಗಳೂ ಬ್ಯಾಟುಗಾರರಿಗೆ ದೊಡ್ಡ ಸವಾಲೊಡ್ಡುತ್ತವೆ. ವಿದೇಶದಲ್ಲಿ ಕಾಗದ ಹುಲಿಗಳು ಎಂಬ ಹಣೆಪಟ್ಟಿಯನ್ನ ಈಗಲೂ ಹೊಂದಿರುವ ಧೋನಿಪಡೆ ಕಿವೀಸ್ ನೆಲದಲ್ಲಾದರೂ ಕಳಚಿಕೊಳ್ಳುತ್ತಾ ಎಂಬುದನ್ನ ಕಾದುನೋಡಬೇಕು...

 

 

 

Add comment




 

More items in this section