FacebookTwitter

ಕರ್ನಾಟಕಕ್ಕೆ ಸತತ 5ನೇ ಜಯ; ದೆಹಲಿ ನಿರಾಸೆ

ದೆಹಲಿ(ಜ.02): ಕರ್ನಾಟಕ ಕ್ರಿಕೆಟ್ ತಂಡ ಸೋಲಿಲ್ಲದ ಸರದಾರನಾಗಿ ತನ್ನ ರಣಜಿ ಲೀಗ್ ವ್ಯವಹಾರವನ್ನ ಮುಗಿಸಿದೆ. ಇಂದು ಮುಕ್ತಾಯೊಂಡ ಗ್ರೂಪ್ ಎ ಕೊನೆಯ ಪಂದ್ಯದಲ್ಲಿ ದೆಹಲಿ ವಿರುದ್ಧ 8 ವಿಕೆಟುಗಳಿಂದ ಕರ್ನಾಟಕ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಗುಂಪಿನ ಅಗ್ರಗಣ್ಯನಾಗಿ ಕರ್ನಾಟಕ ಕ್ವಾರ್ಟರ್ ಫೈನಲ್ ಹಂತಕ್ಕೇರಿದೆ. ದೆಹಲಿ ಟೂರ್ನಿಯಿಂದ ಹೊರಬಿದ್ದಿದೆ.

ಗೆಲ್ಲಲು 115 ರನ್ ಗುರಿ ಪಡೆದ ಕರ್ನಾಟಕ 28 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು. ಮಯಾಂಕ್ ಅಗರ್ವಾಲ್ ಅಜೇಯ ಅರ್ಧಶತಕ ಭಾರಿಸಿ ತಂಡದ ಗೆಲುವನ್ನ ಸುಗಮಗೊಳಿಸಿದರು...

ದೆಹಲಿ 6 ವಿಕೆಟ್ ನಷ್ಟಕ್ಕೆ 132 ರನ್ನುಗಳೊಂದಿಗೆ ಇಂದಿನ ದಿನದಾಟ ಆರಂಭಿಸಿತು. 8ನೇ ವಿಕೆಟ್'ಗೆ ಸುಮೀತ್ ನರ್ವಾಲ್ ಮತ್ತು ಮಿಲಿಂದ್ ಕುಮಾರ್ 40 ರನ್ ಕಲೆಹಾಕಿದ್ದು ಬಿಟ್ಟರೆ ಉಳಿದವರಾರೂ ಹೆಚ್ಚು ರನ್ ಪೇರಿಸಲು ಶಕ್ಯವಾಗಲಿಲ್ಲ. ಮೊದಲ ಇನಿಂಗ್ಸಲ್ಲಿ 202 ರನ್ ಗಳಿಸಿದ್ದ ದೆಹಲಿ ಈ ಎರಡನೇ ಇನಿಂಗ್ಸಲ್ಲಿ 201 ರನ್ನುಗಳಿಗೆ ಆಲೌಟ್ ಆಯಿತು. ಕರ್ನಾಟಕದ ಎಚ್.ಎಸ್.ಶರತ್, ರೋಣಿತ್ ಮೋರೆ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಸಂಪಾದಿಸಿದರು. ಗೆಲ್ಲಲು 115 ರನ್ನುಗಳ ಸುಲಭ ಗುರಿ ಪಡೆದ ಕರ್ನಾಟಕ ನಿರಾತಂಕವಾಗಿ ಜಯ ಸಾಧಿಸಿತು.

ಈ ಗೆಲುವಿನಿಂದ 6 ಪಾಯಿಂಟ್ ಪಡೆದ ಕರ್ನಾಟಕ ಒಟ್ಟು 38 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಲೀಗ್'ನಲ್ಲಿ ಕರ್ನಾಟಕಕ್ಕೆ ಒಂದೂ ಸೋಲು ಎದುರಾಗಲಿಲ್ಲ ಎಂಬುದು ವಿಶೇಷ. ಅಲ್ಲದೇ ಮೊದಲ ಮೂರು ಪಂದ್ಯಗಳನ್ನ ಡ್ರಾ ಮಾಡಿಕೊಂಡು ಪಾಯಿಂಟ್ ಪಟ್ಟಿಯ ತಳದಲ್ಲಿದ್ದ ಕರ್ನಾಟಕ ಆನಂತರ ಸತತ 5 ಗೆಲುವು ಸಾಧಿಸಿದ್ದೂ ಕೂಡ ಗಮನಾರ್ಹವೇ...

ಎ ಗುಂಪಿನಿಂದ ಕರ್ನಾಟಕ, ಪಂಜಾಬ್ ಮತ್ತು ಮುಂಬೈ ತಂಡಗಳು ಕ್ವಾರ್ಟರ್'ಫೈನಲ್ ಹಂತಕ್ಕೇರಿವೆ.

ಬಿ ಗುಂಪಿನಿಂದ ರೇಲ್ವೇಸ್, ಬಂಗಾಳ ಮತ್ತು ಉತ್ತರಪ್ರದೇಶ ತಂಡಗಳು ನಾಕೌಟ್ ಹಂತ ತಲುಪಿವೆ.

ಸಿ ಗುಂಪಿನಿಂದ ಮಹಾರಾಷ್ಟ್ರ ಕ್ವಾರ್ಟರ್'ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ...



ಸ್ಕೋರು ವಿವರ:

ದೆಹಲಿ ಮೊದಲ ಇನಿಂಗ್ಸ್ 202 ರನ್

ಕರ್ನಾಟಕ ಮೊದಲ ಇನಿಂಗ್ಸ್ 289 ರನ್

ದೆಹಲಿ ಎರಡನೇ ಇನಿಂಗ್ಸ್ 201 ರನ್
(ಮಿಥುನ್ ಮನ್ಹಾಸ್ 32, ಮಿಲಿಂದ್ ಕುಮಾರ್ ಅಜೇಯ 31, ರಜತ್ ಭಾಟಿಯಾ 30, ಗೌತಂ ಗಂಭೀರ್ 26, ಸುಮೀತ್ ನರ್ವಾಲ್ 21 ರನ್ - ಶ್ರೇಯಸ್ ಗೋಪಾಲ್ 23/3, ಎಚ್.ಎಸ್.ಶರತ್ 35/3, ರೋನಿತ್ ಮೋರೆ 39/3)

ಕರ್ನಾಟಕ ಎರಡನೇ ಇನಿಂಗ್ಸ್ 116/2
(ಮಾಯಾಂಕ್ ಅಗರವಾಲ್ 68, ರವಿಕುಮಾರ್ ಸಮರ್ಥ್ 20 ರನ್).

 

 

 

Add comment




 

More items in this section