FacebookTwitter

ಕರ್ನಾಟಕ ವಿರುದ್ಧ ಸೆಟೆದು ನಿಂತ ಉತ್ತರಪ್ರದೇಶ ಬಾಲಂಗೋಚಿಗಳು!

ಬೆಂಗಳೂರು(ಜ.09): ಒಂದು ಹಂತದಲ್ಲಿ 65 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಉತ್ತರಪ್ರದೇಶ ಅಚ್ಚರಿ ರೀತಿಯಲ್ಲಿ ಚೇತರಿಕೆ ಕಂಡು ಗೌರವಾರ್ಹ ಮೊತ್ತದತ್ತ ಸಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಕರ್ನಾಟಕದ 349 ರನ್ನುಗಳ ಮೊದಲ ಇನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಎರಡನೇ ದಿನಾಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ನಿಟ್ಟುಸಿರು ಬಿಟ್ಟಿದೆ.

ಕರ್ನಾಟಕದ 3 ನೂರು ಮತ್ತು 5 ಸೊನ್ನೆ!
ಮೊದಲ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದ್ದ ಕರ್ನಾಟಕ ಇಂದು ಎರಡನೇ ದಿನದಾಟ ಮುಂದುವರಿಸಿ 349 ರನ್ನುಗಳಿಗೆ ಆಲೌಟ್ ಆಯಿತು. ನಿನ್ನೆ ಶತಕದಂಚಿನಲ್ಲಿದ್ದ ಸಿ.ಎಂ.ಗೌತಂ ಕೂಡ ಸೆಂಚುರಿ ಬಾರಿಸಿದರು. ಇದರೊಂದಿಗೆ ಕರ್ನಾಟಕದ ಇನಿಂಗ್ಸಲ್ಲಿ ಮೂರು ಶತಕಗಳು ದಾಖಲಾದಂತಾಯಿತು. ವಿಶೇಷವೆಂದರೆ ಮೂರು ಶತಕವೀರರ ಸ್ಕೋರು ಸರಿಯಾಗಿ 100 ರನ್ ಇತ್ತು.

ಅಷ್ಟೇ ಅಲ್ಲ, ಐವರು ಕರ್ನಾಟಕ ಬ್ಯಾಟುಗಾರರು ಶೂನ್ಯ ಸಂಪಾದನೆ ಮಾಡಿದ್ದು ಇನ್ನೊಂದು ವಿಶೇಷ. ಕರ್ನಾಟಕದ ಸ್ಕೋರಲ್ಲಿ ಇಷ್ಟೊಂದು ಸೊನ್ನೆಗಳು ಇದ್ದದ್ದೂ ಹೊಸ ದಾಖಲೆಯಾಗಬಹುದೇನೋ... ಉತ್ತರಪ್ರದೇಶದ ಉದಯೋನ್ಮುಖ ಬೌಲರ್ ಅಮಿತ್ ಮಿಶ್ರಾ 6 ವಿಕೆಟ್ ಪಡೆದು ಗಮನ ಸೆಳೆದರು. ಪ್ರಮುಖ ಬೌಲರ್ ಆರ್.ಪಿ.ಸಿಂಗ್ ಕೆಲವೇ ಓವರ್ ಬೌಲ್ ಮಾಡಿ ಗಾಯಗೊಂಡು ಪೆವಿಲಿಯನ್'ಗೆ ಮರಳಿದ್ದು ಪ್ರವಾಸಿ ತಂಡಕ್ಕೆ ಮುಳುವಾಯಿತು. ಆದರೂ ಆತಿಥೇಯ ಕರ್ನಾಟಕವನ್ನ ನಿರೀಕ್ಷೆಮೀರಿ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದು ಉತ್ತರಪ್ರದೇಶದ ಸಾಧನೆಯಾಗಿತ್ತು..

ಉ.ಪ್ರ.ದ ಕುಸಿತ ಮತ್ತು ಚೇತರಿಕೆ
ಇನ್ನು, ಉತ್ತರಪ್ರದೇಶದ ಮೊದಲ ಇನಿಂಗ್ಸ್ ಆರಂಭ ನಿಜಕ್ಕೂ ತೀರಾ ಕಳಪೆಯಾಗಿತ್ತು. ಕರ್ನಾಟಕ ಉತ್ತಮ ಬೌಲಿಂಗ್ ಪಡೆಯ ದಾಳಿಗೆ ಉ.ಪ್ರ. ಬ್ಯಾಟುಗಾರರು ತತ್ತರಿಸಿಹೋದರು. ಕೇವಲ 65 ರನ್ನಿಗೆ 6 ವಿಕೆಟ್ ಪತನವಾದವು. ಅಭಿಮನ್ಯು ಮಿಥುನ್ ಮತ್ತು ವಿನಯ್ ಕುಮಾರ್ ಅವರ ಮೊನಚು ದಾಳಿಗೆ ಉತ್ತರ ಪ್ರದೇಶದ ಟಾಪ್ ಆರ್ಡರ್ ಬ್ಯಾಟ್ಸ್'ಮನ್ ತರಗೆಲೆಗಳಂತೆ ಉದುರಿಹೋದರು.

ಆದರೆ, ಪರ್ವಿಂದರ್ ಸಿಂಗ್ ಮತ್ತು ಪೀಯುಶ್ ಚಾವ್ಲಾ ಅವರ ಕೆಚ್ಚೆದೆಯ ಬ್ಯಾಟಿಂಗ್ ಸಹಾಯದಿಂದ ಉತ್ತರಪ್ರದೇಶ ಅದ್ಭುತ ಚೇತರಿಕೆ ಕಂಡಿದೆ. ಎರಡನೇ ದಿನಾಂತ್ಯದಕ್ಕೆ ತಂಡ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ. ಪರ್ವೀಂದರ್ ಸಿಂಗ್ 92 ರನ್ನುಗಳಿಂದ ಶತಕವಂಚಿತರಾದರು...

ಆದರೆ, ಇನ್ನೂ 128 ರನ್ನುಗಳ ಹಿನ್ನಡೆಯಲ್ಲಿರುವ ಉತ್ತರಪ್ರದೇಶ ಈ ಪಂದ್ಯ ಉಳಿಸಿಕೊಳ್ಳಲು ಇನ್ನೂ ದೊಡ್ಡ ಹರಸಾಹಸ ಮಾಡಬೇಕೆನ್ನುವುದು ವಾಸ್ತವ....ಸ್ಕೋರು ವಿವರ (2ನೇ ದಿನಾಂತ್ಯಕ್ಕೆ):
ಕರ್ನಾಟಕ ಮೊದಲ ಇನಿಂಗ್ಸ್ 349/10
(ರಾಬಿನ್ ಉತ್ತಪ್ಪ 100, ಕರುಣ್ ನಾಯರ್ 100, ಸಿಎಂ ಗೌತಮ್ 100, ಅಬ್ರಾರ್ ಕಾಜಿ 23 ರನ್ - ಅಮಿತ್ ಮಿಶ್ರಾ 106/6, ಅಂಕಿತ್ ರಾಜಪೂತ್ 49/2, ಆಲಿ ಮುರ್ತಾಜಾ 92/2)

ಉತ್ತರಪ್ರದೇಶ ಮೊದಲ ಇನಿಂಗ್ಸ್ 221/9
(ಪರ್ವಿಂದರ್ ಸಿಂಗ್ 92, ಪೀಯುಶ್ ಚಾವ್ಲಾ 56, ತನ್ಮಯ್ ಶ್ರೀವಾಸ್ತವ 32 ರನ್ - ಅಭಿಮನ್ಯು ಮಿಥುನ್ 70/4, ವಿನಯ್ ಕುಮಾರ್ 49/3)

 

 

 

Add comment
 

More items in this section