FacebookTwitter

ಶತಕವಂಚಿತ ರಾಹುಲ್; ಉತ್ತರಪ್ರದೇಶ ಗೆಲುವಿಗೆ 333 ರನ್ ಟಾರ್ಗೆಟ್

ಬೆಂಗಳೂರು(ಜ.10): ಕರ್ನಾಟಕ ಮತ್ತು ಉತ್ತರ ಪ್ರದೇಶ ರಣಜಿ ಕ್ವಾರ್ಟರ್ ಫೈನಲ್ ಮೂರನೇ ದಿನದ ನಂತರವೂ ಕುತೂಹಲಕಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ಗೆಲ್ಲಲು 333 ರನ್ ಗುರಿ ಪಡೆದಿರುವ ಉತ್ತರಪ್ರದೇಶ ದಿನಾಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿ ಗೆಲುವಿನ ನಿರೀಕ್ಷೆಯಲ್ಲಿದೆ. ಉ.ಪ್ರ. ಇನ್ನೂ 278 ರನ್ ಗಳಿಸಬೇಕಿದೆ...

ನಿನ್ನೆ ಎರಡನೇ ದಿನಾಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದ್ದ ಉತ್ತರಪ್ರದೇಶ ಅದೇ ಸ್ಕೋರಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಆರ್.ಪಿ.ಸಿಂಗ್ ಗಾಯಗೊಂಡಿದ್ದರಿಂದ ಪ್ರವಾಸಿ ತಂಡದ ಈ ನಿರ್ಧಾರ ನಿರೀಕ್ಷಿತವೇ ಆಗಿತ್ತು.

128 ರನ್ನುಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಪ್ರಾರಂಭಿಸಿದ ಕರ್ನಾಟಕ 204 ರನ್ನುಗಳಿಗೆ ಆಲೌಟ್ ಆಯಿತು. ಉದಯೋನ್ಮುಖ ಪ್ರತಿಭೆ ಕೆ.ಎಲ್.ರಾಹುಲ್ ಅಜೇಯ 92 ರನ್ ಗಳಿಸಿದ್ದು ಕರ್ನಾಟಕದ ಪಾಲಿಗೆ ಸಮಾಧಾನ ಕೊಟ್ಟ ಅಂಶವಾಗಿತ್ತು. ರಾಹುಲ್ ಬಿಟ್ಟರೆ ಸ್ವಲ್ಪ ಮಾನ ಉಳಿಸುವ ಆಟವಾಡಿದ್ದು ಸಿಎಂ ಗೌತಮ್ ಮತ್ತು ಕರುಣ್ ನಾಯರ್ ಮಾತ್ರವೇ. ಉತ್ತರಪ್ರದೇಶದ ಆಲ್'ರೌಂಡರ್ ಆಲಿ ಮುರ್ತಾಜಾ 6 ವಿಕೆಟ್ ಪಡೆದು ಕರ್ನಾಟಕದ ಬೃಹತ್ ಮೊತ್ತದ ಆಸೆಗೆ ತಣ್ಣೀರೆರಚಿದರು. ಆದರೂ ಕರ್ನಾಟಕ ಒಟ್ಟು 332 ರನ್ ಮುನ್ನಡೆ ಪಡೆದುಕೊಂಡು ಸಮಾಧಾನಪಟ್ಟಿತು.

ಗೆಲ್ಲಲು 333 ರನ್ ಗುರಿ ಪಡೆದ ಉತ್ತರಪ್ರದೇಶ ನಿಜಕ್ಕೂ ಒಳ್ಳೆಯ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ತನ್ಮಯ್ ಶ್ರೀವಾಸ್ತವ ಮತ್ತು ಮುಕುಲ್ ದಾಗರ್ ಮೊದಲ ವಿಕೆಟ್'ಗೆ 53 ರನ್ ಸೇರಿಸಿ ಆತಿಥೇಯ ಕರ್ನಾಟಕ ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದಾರೆ.

ಪಂದ್ಯದಲ್ಲಿ ಇನ್ನೂ ಎರಡು ದಿನ ಬಾಕಿ ಇದ್ದು ಫಲಿತಾಂಶ ಖಾತ್ರಿ ಇದೆ. ನಾಳೆ, ಕರ್ನಾಟಕದ ಬೌಲರುಗಳು ಕರಾರುವಾಕ್ ದಾಳಿ ಮೂಲಕ ಪ್ರವಾಸಿಗರನ್ನ ಕೆಡವಿಹಾಕುತ್ತಾರಾ ಎಂದು ಕಾದುನೋಡಬೇಕು.



ಸ್ಕೋರು ವಿವರ(3ನೇ ದಿನಾಂತ್ಯಕ್ಕೆ):

ಕರ್ನಾಟಕ ಮೊದಲ ಇನಿಂಗ್ಸ್ 349 ರನ್

ಉತ್ತರ ಪ್ರದೇಶ ಮೊದಲ ಇನಿಂಗ್ಸ್ 221/9(ಡಿಕ್ಲೇರ್)

ಕರ್ನಾಟಕ ಎರಡನೇ ಇನಿಂಗ್ಸ್ 204/10
(ಕೆಎಲ್ ರಾಹುಲ್ ಅಜೇಯ 92, ಸಿ.ಎಂ.ಗೌತಂ 36, ಕರುಣ್ ನಾಯರ್ 25, ಅಭಿಮನ್ಯು ಮಿಥುನ್ 19 ರನ್ - ಆಲಿ ಮುರ್ತಾಜಾ 64/6, ಅಂಕಿತ್ ರಾಜಪೂತ್ 30/2)

ಉತ್ತರಪ್ರದೇಶ ಎರಡನೇ ಇನಿಂಗ್ಸ್ 55/1
(ಮುಕುಲ್ ದಾಗಾರ್ 23, ತನ್ಮಯ್ ಶ್ರೀವಾಸ್ತವ ಅಜೇಯ 23 ರನ್)

 

 

 

Add comment




 

More items in this section