FacebookTwitter

ಉತ್ತರಪ್ರದೇಶ ವಿರುದ್ಧ ಗೆದ್ದ ಕರ್ನಾಟಕ ಸೆಮಿಫೈನಲ್ ಪ್ರವೇಶ

ಬೆಂಗಳೂರು(ಜ.11): ಕರ್ನಾಟಕ ತಂಡ ನಿರೀಕ್ಷೆಯಂತೆ ಉತ್ತರಪ್ರದೇಶವನ್ನ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ನಾಲ್ಕು ದಿನದೊಳಗೇ ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ 92 ರನ್ನುಗಳಿಂದ ಜಯಭೇರಿ ಭಾರಿಸಿ ನಾಲ್ಕರ ಘಟ್ಟಕ್ಕೇರಿದೆ. ಆದರೆ, ಉತ್ತರಪ್ರದೇಶ ಸೋಲೊಪ್ಪುವ ಮುನ್ನ ಆತಿಥೇಯರಿಗೆ ಭಯ ಹುಟ್ಟಿಸಿದ್ದಂತೂ ಹೌದು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಕೆಲ ಪ್ರವಾಸೀ ಬ್ಯಾಟುಗಾರರು ಸ್ವಲ್ಪ ಸತಾಯಿಸುವಲ್ಲಿ ಯಶಸ್ವಿಯಾದರು.

ಗೆಲ್ಲಲು 333 ರನ್ ಗುರಿ ಪಡೆದ ಉತ್ತರಪ್ರದೇಶ 240 ರನ್ನುಗಳಿಗೆ ಆಲೌಟ್ ಆಯಿತು. ಏಳನೇ ವಿಕೆಟ್'ಗೆ 70 ರನ್ ಜೊತೆಯಾಟ ಬಂದಾಗ ಕರ್ನಾಟಕಕ್ಕೆ ಆತಂಕ ಉಂಟಾಗಿದ್ದು ಬಿಟ್ಟರೆ ಫಲಿತಾಂಶ ನಿರೀಕ್ಷಿತವೇ ಆಗಿತ್ತು... ಉದಯೋನ್ಮುಖ ಪ್ರತಿಭೆ ಶ್ರೇಯಸ್ ಗೋಪಾಲ್ 5 ವಿಕೆಟ್ ಕಬಳಿಸಿದ್ದು ಕರ್ನಾಟಕ ಪಾಲಿಗೆ ಭವಿಷ್ಯದ ಆಶಾಕಿರಣವಾಗಿದೆ.

ನಾಲ್ಕನೇ ದಿನದಾಟವನ್ನ 1 ವಿಕೆಟ್ ನಷ್ಟಕ್ಕೆ 55 ರನ್ನುಗಳೊಂದಿಗೆ ಆರಂಭಿಸಿದ ಉತ್ತರಪ್ರದೇಶ 138 ರನ್ನಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಕರ್ನಾಟಕ ಬಹುಬೇಗನೇ ಗೆಲುವು ಸಾಧಿಸುವ ಅಂದಾಜಿತ್ತು. ಆದರೆ, ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಏಕಲವ್ಯ ದ್ವಿವೇದಿ ಮತ್ತು ಪೀಯೂಶ್ ಚಾವ್ಲಾ 7ನೇ ವಿಕೆಟ್'ಗೆ 70 ರನ್ ಸೇರಿಸಿದಾಗ ಆತಿಥೇಯರಲ್ಲಿ ನಡುಕ ಉಂಟಾಗಿತ್ತು. ಈ ಜೋಡಿಯನ್ನ ಭೇದಿಸಲು ವಿನಯ್ ಕುಮಾರ್ ಬಳಗ ಬಹಳ ಹರಸಾಹಸ ಮಾಡಬೇಕಾಯಿತು.

ಏಕಲವ್ಯರನ್ನ ಬೀಳಿಸಲು ಅಭಿಮನ್ಯುವಿಗಷ್ಟೇ ಸಾಧ್ಯವಾಯಿತು. ಅಭಿಮನ್ಯು ಮಿಥುನ್ ಬೌಲಿಂಗ್ ಎಸೆತಕ್ಕೆ ಏಕಲವ್ಯ ದ್ವಿವೇದಿ ಔಟಾದ ಬಳಿಕ ಉತ್ತರ ಪ್ರದೇಶದ ಹೋರಾಟ ನಿಚ್ಚಳವಾಗಿ ಅವನತಿಯತ್ತ ಸಾಗಿ 240 ರನ್ನಿಗೆ ಮುಕ್ತಾಯಗೊಂಡಿತು.

ಕರ್ನಾಟಕದ ಪರ ಯುವ ಆಲ್ರೌಂಡರ್ ಶ್ರೇಯಸ್ ಗೋಪಾಲ್ 5 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್'ಗೆ 3 ಮತ್ತು ವಿನಯ್ ಕುಮಾರ್'ಗೆ 2 ವಿಕೆಟ್ ಪ್ರಾಪ್ತವಾಯಿತು.

ಸೆಮಿಫೈನಲ್'ನಲ್ಲಿ ಕರ್ನಾಟಕ ವರ್ಸಸ್ ಪಂಜಾಬ್
ಮುಂದಿನ ವಾರ ಜನವರಿ 18ರಿಂದ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪ್ರವೇಶಕ್ಕಾಗಿ ಕರ್ನಾಟಕ ಮತ್ತು ಪಂಜಾಬ್ ಅಂದು ಮುಖಾಮುಖಿಯಾಗಲಿವೆ. ಪಂಜಾಬ್ ತಂಡ ಇಂದು ಮುಕ್ತಾಯಗೊಂಡ ಕ್ವಾರ್ಟರ್'ಫೈನಲ್'ನಲ್ಲಿ ಜಮ್ಮೂಕಾಶ್ಮೀರವನ್ನ 100 ರನ್ನಿಂದ ಸೋಲಿಸಿ ಸೆಮಿಫೈನಲ್'ಗೇರಿದೆ...

ಮುಂಬೈಗೆ ಶಾಕ್ ಕೊಟ್ಟ ಮಹಾರಾಷ್ಟ್ರ
ಈ ಬಾರಿಯ ರಣಜಿಯಲ್ಲಿ ಕಳಪೆ ಆಟವಾಡಿಯೂ ಅಚ್ಚರಿ ರೀತಿಯಲ್ಲಿ ನಾಕೌಟ್ ಹಂತಕ್ಕೇರಿದ್ದ ಮಾಜಿ ಚಾಂಪಿಯನ್ಸ್ ಮುಂಬೈ ತಂಡವನ್ನ ಮನೆಗೆ ಕಳುಹಿಸುವಲ್ಲಿ ಮಹಾರಾಷ್ಟ್ರ ಯಶಸ್ವಿಯಾಗಿದೆ. ಮಹಾರಾಷ್ಟ್ರ ಇಂದು 8 ವಿಕೆಟ್'ಗಳಿಂದ ಮುಂಬೈಯನ್ನ ಸೋಲಿಸಿ ಸೆಮಿಫೈನಲ್ ತಲುಪಿದೆ. ಕೇದಾರ್ ಜಾಧವ್ ಮತ್ತು ವಿಜಯ್ ಝೋಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಮಹಾರಾಷ್ಟ್ರಕ್ಕೆ ಗೆಲುವಿನ ಸಂತಸ ತಂದರು. ಕೇದಾರ್ ಜಾಧವ್ ಅಜೇಯ ಶತಕ ಭಾರಿಸಿದರೆ, ವಿಜಯ್ ಝೋಲ್ ಅಜೇಯ 91 ರನ್ ಪೇರಿಸಿದರು. ದುರ್ಬಲ ಬೌಲಿಂಗ್ ದಾಳಿ ಇದ್ದರೂ ತನ್ನ ಬಲಿಷ್ಠ ಬ್ಯಾಟಿಂಗ್ ಸಹಾಯದಿಂದ ಮಹಾರಾಷ್ಟ್ರ ಎಲ್ಲರ ಗಮನ ಸೆಳೆದಿದೆ...



ಕರ್ನಾಟಕ v/s ಉತ್ತರ ಪ್ರದೇಶ ಸ್ಕೋರು ವಿವರ(4ನೇ ದಿನ):

ಕರ್ನಾಟಕ ಮೊದಲ ಇನಿಂಗ್ಸ್ 349 ರನ್

ಉತ್ತರಪ್ರದೇಶ ಮೊದಲ ಇನಿಂಗ್ಸ್ 221/9(ಡಿಕ್ಲೇರ್)

ಕರ್ನಾಟಕ ಎರಡನೇ ಇನಿಂಗ್ಸ್ 204 ರನ್

ಉತ್ತರ ಪ್ರದೇಶ ಎರಡನೇ ಇನಿಂಗ್ಸ್ 240 ರನ್
(ತನ್ಮಯ್ ಶ್ರೀವಾಸ್ತವ 44, ಪೀಯೂಶ್ ಚಾವ್ಲಾ 44, ಏಕಲವ್ಯ ದ್ವಿವೇದಿ 33, ಅಲಿ ಮುರ್ತಾಜಾ 29, ಮುಕುಲ್ ದಾಗರ್ 23 ರನ್ - ಶ್ರೇಯಸ್ ಗೋಪಾಲ್ 59/5, ಅಭಿಮನ್ಯು ಮಿಥುನ್ 71/3, ಆರ್.ವಿನಯ್ ಕುಮಾರ್ 72/2)

 

 

 

Add comment




 

More items in this section