FacebookTwitter

ಬಂಟರನ್ನಿಟ್ಟುಕೊಂಡು ಭಂಡಾಟ ಬೇಡ ಧೋನಿ-ತಪ್ಪು ತಿದ್ದಿಕೊಳ್ಳದಿದ್ದರೆ ಸೋಲಿನ ಸರಣಿ

ನೇಪಿಯರ್(ಜ.21): ಸದ್ಯದ ಟೀಮ್ ಇಂಡಿಯಾ ಕ್ರಿಕೆಟ್ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡ ಎಂದೇ ಹೇಳಲಾಗುತ್ತಿದೆ. ಆದರೆ, ಇತ್ತೀಚಿನ ಸರಣಿಗಳಲ್ಲಿ ಭಾರತದ ಆಟಗಾರರ ಪ್ರದರ್ಶನ ನೋಡಿದರೆ ಇವರು ಕೇವಲ `ಕಾಗದದ ಹುಲಿ'ಗಳಾಗಿರುವಂತೆ ತೋರುತ್ತಿದೆ. ತವರಿನಲ್ಲಿ ಬಿಟ್ಟರೆ ವಿದೇಶಗಳಲ್ಲಿ ಇವರ ಆಟ ನಡೆಯಲ್ಲ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಾಷ್ ಔಟ್ ಆದ ಭಾರತ ನ್ಯೂಜಿಲೆಂಡ್ ಸರಣಿಯ ಆರಂಭದಲ್ಲಿ ಮುಗ್ಗರಿಸಿದೆ. ಉಪನಾಯಕ ವಿರಾಟ್ ಕೊಹ್ಲಿಯ ಶತಕದ ನೆರವಿನಿಂದ ಗೆಲ್ಲುವ ಅವಕಾಶವಿದ್ದ ನೇಪಿಯರ್`ನ ಮೊದಲ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್`ಮನ್`ಗಳ ವೈಫಲ್ಯದಿಂದ ಸೋಲೊಪ್ಪಿಕೊಳ್ಳುವ ಮೂಲಕ ಭಾರತ ಮುಖಭಂಗ ಅನುಭವಿಸಿದೆ.

ನಾಯಕ ಧೋನಿಯ ಧೃತರಾಷ್ಟ್ರ ಪ್ರೇಮ: ವಿದೇಶಿ ಪಿಚ್ ಅಷ್ಟೇ ಅಲ್ಲ, ಇದರ ಜೊತೆಗೆ ನಾಯಕ ಧೋನಿಯ ಕೆಲ ನಿರ್ಧಾರಗಳೂ ತಂಡದ ಸೋಲಿಗೆ ಕಾರಣ ಆಗುತ್ತಿದೆ ಎನ್ನುತ್ತಿದ್ದಾರೆ ಟೀಕಾಕಾರರು. ಫಾರ್ಮ್ ಕಳೆದುಕೊಂಡಿರುವ ಆಟಗಾರರನ್ನ ತಂಡದಿಂದ ಕೈಬಿಡದೆ ಧೋನಿ ಧೃತರಾಷ್ಟ್ರ ಪ್ರೇಮ ಮೆರೆಯುತ್ತಿರುವುದು ತಂಡದ ವೈಫಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ವೈಫಲ್ಯ ಅನುಭವಿಸುತ್ತಿದ್ದರೂ ತಂಡದಲ್ಲಿ ಮುಂದುವರೆದಿರುವ ಸುರೇಶ್ ರೈನಾ: ಆಸ್ಟ್ರೇಲಿಯಾ, ವೆಸ್ಟ್`ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರೂ ಏಕದಿನ ಸರಣಿಗಳಲ್ಲಿ ಸುರೇಶ್ ರೈನಾ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಕಳೆದ 15-20 ಪಂದ್ಯಗಳಲ್ಲಿ ಸುರೇಶ್ ರೈನಾ ಒಂದೋ ಎರಡೋ ಅರ್ಧಶತಕ ಸಿಡಿಸಿದ್ದಾರೆ. 10ರಿಂದ 20 ರನ್ ಹೊಡೆಯುವಷ್ಟರಲ್ಲಿ ಪೆವಿಲಿಯನ್ ಸೇರರಿಕೊಳ್ಳುತ್ತಿದ್ದಾರೆ. ಕಳೆದ 10 ಪಂದ್ಯಗಳಲ್ಲಿ ಸುರೇಶ್ ರೈನಾ 39, 17, 16, 28, 0, 23, 34, 14, 36, 18 ರನ್ ಗಳಿಸಿದ್ದಾರೆ. ಈ ಸಂಖ್ಯೆಯನ್ನ ನೋಡಿದರೆ ಸಾಕು ಇದರ ಸರಾಸರಿ ಬಗ್ಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಮಧ್ಯಮ ಕ್ರಮಾಂಕದಲ್ಲಿರುವ ರೈನಾ ವೈಫಲ್ಯದಿಂದ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಓಪನರ್`ಗಳು ವಿಫಲವಾದರೆ ಮತ್ತೆ ಮೇಲೇಳಲು ಬೇಕಾದ ಚೈತನ್ಯ ಮಧ್ಯಮ ಕ್ರಮಾಂಕದಿಂದ ಸಿಗುತ್ತಿಲ್ಲ.

ಬೆಂಚ್ ಕಾಯುತ್ತಿರುವವರಿಗೆ ಅವಕಾಶ ಸಿಗುತ್ತಿಲ್ಲ: ದೇಶೀಯ ಕ್ರಿಕೆಟ್`ನಲ್ಲಿ ಉತ್ತಮ ಸಾಧನೆಗೈದಿರುವ ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಮತ್ತು ಅಂಬಾಟಿ ರಾಯುಡು ನ್ಯೂಜಿಲೆಂಡ್ ಪ್ರವಾಸದಲ್ಲಿರುವ 15 ಸದಸ್ಯರ ಭಾರತ ತಂಡದಲ್ಲಿದ್ದಾರೆ. ರೈನಾ ಬದಲಿಗೆ ಬಿನ್ನಿಗೆ ಅವಕಾಶ ನೀಡಿದರೆ ಬ್ಯಾಟಿಂಗ್ ಜೊತೆಗೆ ಬೌಲಿಂಗ್`ಗೂ ಅನುಕೂಲವಾಗಲಿದೆ. ಐಪಿಎಲ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್`ನಲ್ಲಿ ಯಶಸ್ಸು ಕಂಡಿರುವ ಅಂಬಾಟಿ ರಾಯುಡು ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಬಲ್ಲವರಾಗಿದ್ದಾರೆ. ಆದರೆ, ರೈನಾ ಫಾರ್ಮ್ ಕಳೆದುಕೊಂಡಿದ್ದರು ಬೇರೆಯವರಿಗೆ ಅವಕಾಶ ಕೊಡುವ ಗೋಜಿಗೆ ಹೋಗುತ್ತಿಲ್ಲ ಧೋನಿ

ಪರಿಣಾಮಕಾರಿಯಾಗದ ಇಶಾಂತ್ ಶರ್ಮಾ: ಇನ್ನೂ, ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ ಪರಿಣಾಮಕಾರಿಯಾಗುತ್ತಿಲ್ಲ. ಸರಣಿಯಿಂದ ಸರಣಿಗೆ ಇಶಾಂತ್ ದುಬಾರಿ ಎನಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೇವಲ 9 ಓವರ್`ಗೆ 70 ರನ್ ನೀಡುವ ಮೂಲಕ ಇಶಾಂತ್ ಬೌಲಿಂಗ್ ಮೊನಚು ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಹೀಗಿರುವಾಗ ಧೋನಿ ಬೆಂಚ್ ಕಾಯುತ್ತಿರುವವರಿಗೆ ಅವಕಾಶ ನೀಡಬೇಕಿದೆ. ಪ್ರಥಮ ದರ್ಜೆ ಕ್ರಿಕೆಟ್`ನಲ್ಲು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಈಶ್ವರ್ ಪಾಂಡೆಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬೇಕಿದೆ.

2ನೇ ಪಂದ್ಯದಲ್ಲಾದರೂ ಬದಲಾಗುತ್ತಾ ಅಂತಿಮ 11ರ ಪಟ್ಟಿ: ನಾಳೆ ಹ್ಯಾಮಿಲ್ಟನ್`ನಲ್ಲಿ ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಇಲ್ಲಾದರೂ ಧೋನಿ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಹೊಸಬರಿಗೆ ಅವಕಾಶ ನೀಡುತ್ತಾರಾ..? ಇಲ್ಲವೇ ಬಂಟರನ್ನಿಟ್ಟುಕೊಂಡು ಅದೇ ಬಂಡಾಟ ಮುಂದುವರಿಸುತ್ತಾರಾ..? ಕಾದುನೋಡಬೇಕು..

 

 

 

Add comment
 

More items in this section